ಚಿಕ್ಕಮಗಳೂರು: ಗರ್ಭಿಣಿಗೆ ಹಲ್ಲೆ ಮಾಡಿ, ದಲಿತ ಕೂಲಿ ಕಾರ್ಮಿಕರನ್ನು ಕೊಠಡಿಯಲ್ಲಿ ಕೂಡಿ ಹಾಕಿದ ತೋಟದ ಮಾಲಕ

Update: 2022-10-11 13:56 GMT

ಚಿಕ್ಕಮಗಳೂರು, ಅ.11: ಕೂಲಿ ಕೆಲಸಕ್ಕೆ ಬಂದ ದಲಿತ ಸಮುದಾಯದ ಕಾರ್ಮಿಕ ಕುಟುಂಬಗಳು ಮುಂಗಡವಾಗಿ ಪಡೆದುಕೊಂಡಿದ್ದ ಹಣವನ್ನು ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ಕಾಫಿ ಎಸ್ಟೇಟ್‍ನ ಮಾಲಕ ಹಾಗೂ ಆತನ ಮಗ ಮಹಿಳೆಯರೂ ಸೇರಿದಂತೆ 14 ಕಾರ್ಮಿಕರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ, ಗರ್ಭಿಣಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯನ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

► ಘಟನೆ ಹಿನ್ನೆಲೆ:  ಮೂಲತಃ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯ ಗಾಳಿಗಂಡಿ ನಿವಾಸಿಗಳಾದ ಸತೀಶ್, ಮಂಜು ಹಾಗೂ ವಿಜಯ ಎಂಬ ದಲಿತ ಸಮುದಾಯದ ಕಾರ್ಮಿಕ ಕುಟುಂಬಗಳ ಸದಸ್ಯರು ನರಸಿಂಹರಾಜಪುರ ತಾಲೂಕಿನ ಜೇನುಗದ್ದೆ ಸಮೀಪದ ಹುಣಸೇಹಳ್ಳಿ ಪುರ ಗ್ರಾಮದ ಜಗದೀಶ್‍ಗೌಡ ಎಂಬವರ ಕಾಫಿ ಎಸ್ಟೇಟ್‍ನಲ್ಲಿ ಕೂಲಿ ಕೆಲಸಕ್ಕೆ ಇತ್ತೀಚೆಗೆ ತೆರಳಿ ಎಸ್ಟೇಟ್‍ನಲ್ಲಿ ಕೆಲಸ ಮಾಡಿಕೊಂಡಿ ಅಲ್ಲಿನ ಲೈನ್ ಮನೆಗಳಲ್ಲಿ ನೆಲೆಸಿದ್ದರು. ಮೂವರ ಕುಟುಂಬಸ್ಥರು ಎಸ್ಟೇಟ್ ಮಾಲಕರಿಂದ ಸುಮಾರು 9ಲಕ್ಷ ರೂ. ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದು, ಇತ್ತೀಚೆಗೆ ಮಂಜು ಹಾಗೂ ಸತೀಶ್ ಎಂಬವರು ಮಕ್ಕಳ ವಿಚಾರದಲ್ಲಿ ಅಲ್ಲಿನ ಬೇರೆ ಕಾರ್ಮಿಕರೊಂದಿಗೆ ಜಗಳ ಆಗಿತ್ತು. ಈ ವೇಳೆ  ತೋಟದ ಮಾಲಕ ಜಗದೀಶ್‍ಗೌಡ ಮಂಜು ಎಂವರಿಗೆ ಹಲ್ಲೆ ಮಾಡಿ ನಿಂದಿಸಿದ್ದರು ಎನ್ನಲಾಗಿದೆ.

ಜಗದೀಶ್‍ಗೌಡನ ವರ್ತನೆಯಿಂದ ಬೇಸರಗೊಂಡ ಮಂಜು, ವಿಜಯ ಹಾಗೂ ಸತೀಶ್ ತಮ್ಮ ಕುಟುಂಬಸ್ಥರೊಂದಿಗೆ ಎಸ್ಟೇಟ್‍ನಲ್ಲಿ ಕೆಲಸ ಮಾಡಲು ಒಪ್ಪದೇ ಬೇರೆಡೆ ಕೆಲಸಕ್ಕೆ ಹೋಗುವುದಾಗಿ ಮಾಲಕನಿಗೆ ತಿಳಿಸಿದ್ದರು. ಇದರಿಂದ ಕೋಪಗೊಂಡ ಎಸ್ಟೇಟ್ ಮಾಲಕ ಜಗದೀಶ್‍ಗೌಡ ತಾನು ನೀಡಿದ್ದ ಮುಂಗಡ ಹಣವನ್ನು ಹಿಂದಿರುಗಿಸುವಂತೆ ಪಟ್ಟು ಹಿಡಿದಿದ್ದಾನೆ. ಹಣ ಹೊಂದಿಸಿಕೊಂಡು ಹಿಂದಿರುಗಿಸುವುದಾಗಿ ಹೇಳಿ ಮಂಜು ಹಾಗೂ ಸತೀಶ್ ಎಂಬವರು ತಮ್ಮ ಕುಟುಂಬದ ಸದಸ್ಯರನ್ನು ಎಸ್ಟೇಟ್‍ನಲ್ಲೇ ಬಿಟ್ಟು ಬೇರೆ ತೋಟಗಳಲ್ಲಿ ಕೆಲಸ ಕೇಳಿಕೊಂಡು ಬರಲು ಹಿಂದಿರುಗಿದ್ದಾರೆ. 

ಈ ಮಧ್ಯೆ ಎಸ್ಟೇಟ್ ಮಾಲಕ ಜಗದೀಶ್‍ಗೌಡ ಕೂಡಲೇ ಹಣ ನೀಡುವಂತೆ ಒತ್ತಡ ಹೇರಿದ್ದಲ್ಲದೇ ಕಳೆದ ಶನಿವಾರ ಮಂಜು, ಸತೀಶ್ ಹಾಗೂ ವಿಜಯ ಕುಟುಂಬಸ್ಥರನ್ನು ಎಸ್ಟೇಟ್‍ನ ಲೈನ್ ಮನೆಯ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾನೆ, ಇದನ್ನು ಪ್ರಶ್ನಿಸಿದ ಅರ್ಪಿತಾ, ರೂಪಾ, ಕವಿತಾ, ತಿಲಕ್ ಹಾಗೂ ಇಂದ್ರ ಎಂಬವರ ಮೇಲೆ ಜಗದೀಶ್‍ಗೌಡ ಹಾಗೂ ಅವರ ಮಗ ತಿಲಕ್ ಹಲ್ಲೆ ಮಾಡಿದ್ದಾನೆ. ಎಸ್ಟೇಟ್ ಮಾಲಕ ಹಾಗೂ ಆತನ ದೌರ್ಜನ್ಯವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡುತ್ತಿದ್ದ ವಿಜಯ ಹಾಗೂ ಅವರ ಪತ್ನಿ, ಗರ್ಭಿಣಿ ಅರ್ಪಿತಾರಿಗೆ ಮನಬಂದಂತೆ ನಿಂದಿಸಿದ್ದಲ್ಲೇ ಹಲ್ಲೆ ಮಾಡಿ ಅಲ್ಲಿದ್ದವರ ಎಲ್ಲರ ಮೊಬೈಲ್‍ಅನ್ನು ಕಿತ್ತುಕೊಂಡು ಮತ್ತೆ ಕೋಣೆಯೊಂದರಲ್ಲಿ ಸುಮಾರು 14 ಮಂದಿ ಕಾರ್ಮಿಕರು ಮತ್ತು ಅವರ ಮಕ್ಕಳನ್ನು ಕೂಡಿ ಹಾಕಿದ್ದಾರೆ. ಗರ್ಭಿಣಿಯಾಗಿದ್ದ ಅರ್ಪಿತಾರಿಗೆ ತೋಟದ ಮಾಲಕ ಹಲ್ಲೆ ಮಾಡಿದ ಘಟನೆಯಿಂದಾಗಿ ಆಕೆಗೆ ಹೊಟ್ಟೆ ನೋವು ಹೆಚ್ಚಾಗಿದ್ದು, ಈ ವೇಳೆ ಜಗದೀಶ್‍ಗೌಡನ ಜೀಪ್‍ನಲ್ಲೇ ಬಾಳೆಹೊನ್ನೂರು ಸಮೀಪದ ಕಡಬಗೆರೆ ಆಸ್ಪತ್ರೆಗೆ ಕರೆ ತರಲಾಗಿದೆ. ಅಲ್ಲಿನ ವೈದ್ಯರು ಆಕೆಗೆ ಮೂಡಿಗೆರೆ ಆಸ್ಪತ್ರೆಗೆ ಕಳುಹಿಸಿದ್ದು, ಸೋಮವಾರ ಗರ್ಭೀಣಿ ಮಹಿಳೆ ಅರ್ಪಿತಾ ಮೂಡಿಗೆರೆಯಲ್ಲಿ ಚಿಕಿತ್ಸೆ ಪಡೆದು ನಂತರ ಚಿಕ್ಕಮಗಳೂರು ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 

ಈ ಸಂಬಂಧ ಅರ್ಪಿತಾ ತಮ್ಮ ಸಂಬಂಧಿಕರೊಂದಿಗೆ ಬಾಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ್ದು, ಬಾಳೆಹೊನ್ನೂರು ಪೊಲೀಸರು ಜಗದೀಶ್‍ಗೌಡ ಹಾಗೂ ಆತನ ಮಗ ತಿಲಕ್ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಎಫ್‍ಐಆರ್ ದಾಖಲು ಮಾಡಿದ್ದಾರೆಂದು ತಿಳಿದು ಬಂದಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳಿಬ್ಬರು ತಲೆ ಮರೆಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

---------------------------------------

'ಮುಂಗಡ ಹಣ ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ಜಗದೀಶ್ ಗೌಡ ಹಾಗೂ ಆತನ ಮಗ ತಿಲಕ್ ಕೂಲಿ ಕಾರ್ಮಿಕರನ್ನು ಕೂಡಿ ಹಾಕಿ ಹಲ್ಲೆ ಮಾಡಿರುವ ಪ್ರಕರಣ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಅರ್ಪಿತಾ ಎಂಬವರು ನೀಡಿರುವ ದೂರಿನ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಅಟ್ರಾಸಿಟಿ ಕೇಸ್ ಸೇರಿದಂತೆ ಹಲವು ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ'.

- ಉಮಾ ಪ್ರಶಾಂತ್, ಎಸ್ಪಿ

---------------------------------------------

'ಮುಂಗಡ ಹಣ ಪಡೆದಿದ್ದು ನಿಜ, ಆದರೆ ಎಸ್ಟೇಟ್ ಮಾಲಕ ಜಗದೀಶ್‍ನ ಕಿರುಕುಳ ತಡೆಯಲು ಸಾಧ್ಯವಾಗದ ಕಾರಣಕ್ಕೆ ಅಲ್ಲಿ ಕೆಲಸ ಮಾಡಲ್ಲ ಎಂದು ಹೇಳಿ ಆತನಿಂದ ಪಡೆದ ಹಣ ಹಿಂದಿರುಗಿಸಲು ಕುಟುಂಬಸ್ಥರನ್ನು ಅಲ್ಲಿಯೇ ಬಿಟ್ಟು ಹಣ ಹೊಂದಿಸಲು ಬಂದಿದ್ದೆವು. ಈ ವೇಳೆ ನಮ್ಮ ಸಂಬಂಧಿಕರ ಮೇಲೆ ಹಲ್ಲೆ ಮಾಡಿ, ಮೊಬೈಲ್ ಕಿತ್ತುಕೊಂಡಿರುವುದಲ್ಲದೇ ಎಲ್ಲರನ್ನೂ ಕೂಡಿ ಹಾಕಿ ಹಿಂಸೆ ನೀಡಲಾಗಿದೆ. ಗರ್ಭಿಣಿ ಎಂಬುದನ್ನೂ ನೋಡದೇ ಮಹಿಳೆಯೊಬ್ಬರ ಕೆನ್ನೆಗೆ ಹೊಡೆದು ಹಿಂಸೆ ನೀಡಿದ್ದಾರೆ. ನಮ್ಮ ಕುಟುಂಬಸ್ಥರ ಮೇಲೆ ನಡೆದಿರುವ ದೌರ್ಜನಕ್ಕೆ ನ್ಯಾಯ ದೊರಕಿಸಿಕೊಡಬೇಕು'.

- ಮಂಜು, ಗರ್ಭಿಣಿ ಮಹಿಳೆ ಅರ್ಪಿತಾ ಪತಿಯ ಸಂಬಂಧಿ
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News