ಆ ತಾಯಿ ಕಳೆದುಕೊಂಡ ಮಗುವನ್ನು ನೀವು ಮರಳಿ ತರಲು ಸಾಧ್ಯವೇ?: ಸಿಎಂ ಬೊಮ್ಮಾಯಿಗೆ ಸುರ್ಜೆವಾಲಾ​ ಪ್ರಶ್ನೆ

Update: 2022-10-12 07:34 GMT

ಬೆಂಗಳೂರು: ಮುಂಗಡವಾಗಿ ಪಡೆದುಕೊಂಡಿದ್ದ ಹಣವನ್ನು ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ಕಾಫಿ ಎಸ್ಟೇಟ್‍ನ ಮಾಲಕ ಹಾಗೂ ಆತನ ಮಗ ಮಹಿಳೆಯರೂ ಸೇರಿದಂತೆ 14 ಕಾರ್ಮಿಕರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ, ಗರ್ಭಿಣಿಗೆ ಹಲ್ಲೆ ಮಾಡಿರು ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಮೀಪ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ''ಬಿಜೆಪಿ ನಾಯಕರಿಂದ ದಲಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮೌನವಾಗಿರುವುದೇಕೆ? ಮೌನ ಎಂದರೆ ಯುದ್ಧತಂತ್ರದ ಅನುಮೋದನೆ ಅಲ್ಲವೇ?  ದೌರ್ಜನ್ಯ ನಡೆದ ಗ್ರಾಮಕ್ಕೆ ನೀವೇಕೆ ಭೇಟಿ ನೀಡಿಲ್ಲ? ಆ ತಾಯಿ ಕಳೆದುಕೊಂಡ ಮಗುವನ್ನು ನೀವು ಮರಳಿ ತರಲು ಸಾಧ್ಯವೇ?'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.''

''ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ 14 ದಲಿತ ಕಾರ್ಮಿಕ ಮಹಿಳೆಯರನ್ನು ಅಕ್ರಮವಾಗಿ ಬಂಧಿಸಿರುವ, ಗರ್ಭಿಣಿ ಮಹಿಳೆಗೆ ಹಲ್ಲೆ ಮಾಡುವ ವಿಡಿಯೋ ಹರಿದಾಡುತ್ತಿದೆ. ಅಲ್ಲದೇ ರಾಜಕೀಯ ಒತ್ತಡದಿಂದ ಕೇಸ್ ಮುಚ್ಚಿ ಹಾಕಲು ಯತ್ನಿಸಲಾಗಿದೆ ಎಂದು ವರದಿಯಾಗಿದೆ. ಸರ್ಕಾರ ಈ ಕೂಡಲೇ ಈತನ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು'' ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಆಗ್ರಹಿಸಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News