ಮೈಸೂರು: ಅರಣ್ಯ ಇಲಾಖೆ ಅಧಿಕಾರಿಗಳ ವಶದಲ್ಲಿದ್ದ ಆದಿವಾಸಿ ಯುವಕ ಅನುಮಾನಾಸ್ಪದ ಸಾವು
ಮೈಸೂರು: ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಅರಣ್ಯ ಇಲಾಖೆ ವಶದಲ್ಲಿದ್ದ ಆದಿವಾಸಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಹೆಚ್ಡಿ ಕೋಟೆ ತಾಲೂಕಿನ ಹೊಸಹಳ್ಳಿ ಹಾಡಿಯಲ್ಲಿ ನಡೆದಿದೆ.
ಯುವಕನನ್ನು ಆಸ್ಪತ್ರೆಗೆ ಸೇರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕು ಬಂಡೀಪುರ ರಾಷ್ಟ್ರೀಯ ಅರಣ್ಯ ವ್ಯಾಪ್ತಿಗೆ ಸೇರುವ ಗುಂಡ್ರೆ ಅರಣ್ಯದ ಎನ್.ಬೇಗೂರು ಗ್ರಾ.ಪಂ. ವ್ಯಾಪ್ತಿಯ ಹೊಸಹಳ್ಳಿ ಹಾಡಿಯ ವ್ಯಕ್ತಿ ಕರಿಯಪ್ಪ(48) ಸಾವಿಗೀಡಾಗಿದ್ದು. ಈತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹೊಡೆದು ಸಾಯಿಸಿದ್ದಾರೆ ಎಂದು ಕುಟುಂಬದ ಸದಸ್ಯರು ಮತ್ತು ಮಾನಹ ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದಾರೆ.
ಹೊಸಹಳ್ಳಿ ಹಾಡಿಯ ಕರಿಯಪ್ಪ ಎಂಬ ವ್ಯಕ್ತಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಎಂದು ಅ.10 ರಂದು ಅರಣ್ಯ ಇಲಾಖೆ ಅಧಿಕಾರಿಗಳು ಆತನನ್ನು ಬಂಧಿಸಿ ವನ್ಯ ಜೀವಿ ಹಕ್ಕುಗಳ ಕಾಯ್ದೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಆತನನ್ನು ಪೊಲೀಸ್ ವಶಕ್ಕೆ ನೀಡದೆ ಅರಣ್ಯ ಇಲಾಖೆ ಕ್ಯಾಂಪ್ ನಲ್ಲೇ ಇಟ್ಟುಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಕೊಲೆ ಆರೋಪ: ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಕೆ.ಆರ್.ಆಸ್ಪತ್ರೆಯ ಶವಾಗಾರದ ಬಳಿ ಆಗಮಿಸಿ, ಮೃತ ದೇಹವನ್ನು ಪರಿಶೀಲಿಸಿ, ಇದೊಂದು ಅರಣ್ಯ ಇಲಾಖೆಯವರ ದೌರ್ಜನ್ಯದಿಂದ ನಡೆದಿರುವ ಕೊಲೆ ಎಂದು ಆರೋಪಿಸಿದ್ದಾರೆ.
ಹಾಡಿಯ ಜೇನು ಕುರುಬ ಜನಾಂಗಕ್ಕೆ ಸೇರಿದ ವ್ಯಕ್ತಿಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಆದರೆ ಆತನನ್ನು ಪೊಲೀಸ್ ವಶಕ್ಕೆ ನೀಡದೆ ಅರಣ್ಯ ಇಲಾಖೆ ಕ್ಯಾಂಪ್ ನಲ್ಲೇ ಇಟ್ಟುಕೊಂಡು ಮನಸೊ ಇಚ್ಛೆ ಥಳಿಸಿದ್ದಾರೆ. ಪರಿಣಾಮ ಆತ ಸಾವಿಗೀಡಾಗಿದ್ದಾನೆ. ಆತನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪ್ರಸನ್ನ ಆರೋಪಿಸಿದರು.
ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಎಚ್.ಡಿ.ಕೋಟೆ ತಹಶೀಲ್ದಾರ್ ರತ್ನಾಂಬಿಕೆ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿ, ಮೃತದೇಹವನ್ನು ಪರಿಶೀಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಯುವಕನ ಸಾವಿನ ವಿಷಯ ತಿಳಿದು ಆ್ಪತ್ರೆಗೆ ಭೇಟಿ ನೀಡಿದ್ದೇನೆ. ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಅವರು ಸ್ಥಳದಲ್ಲಿ ಇಲ್ಲದಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತೇನೆ. ಘಟನೆ ಸಂಬಂಧ ಸೂಕ್ತ ತನಿಖೆ ನಡೆಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು' ಎಂದು ಹೇಳಿದರು.