24 ಗಂಟೆಗಳಲ್ಲಿ FIR ಮಾಹಿತಿ ವೆಬ್‍ಸೈಟ್‍ನಲ್ಲಿ ಹಾಕಲು ಕೋರಿ ಹೈಕೋರ್ಟ್ ಗೆ ಅರ್ಜಿ
ಬೆಂಗಳೂರು, ಅ.12: ಲೋಕಾಯುಕ್ತ ಪೊಲೀಸರು ದಾಖಲಿಸಿದ ಎಫ್‍ಐಆರ್ ಅನ್ನು 24 ಗಂಟೆಗಳಲ್ಲಿ ವೆಬ್‍ಸೈಟ್‍ನಲ್ಲಿ ಹಾಕುವ ಸಂಬಂಧ ಲೋಕಾಯುಕ್ತಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಈ ಕುರಿತು ನಗರದ ವಕೀಲ ಎಸ್.ಉಮಾಪತಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮತ್ತು ಲೋಕಾಯುಕ್ತ ಎಡಿಜಿಪಿ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಎಫ್‍ಐಆರ್ ದಾಖಲಾದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಅದನ್ನು ವೆಬ್‍ಸೈಟ್‍ನಲ್ಲಿ ಹಾಕಬೇಕೆಂದು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಲೋಕಾಯುಕ್ತ ಪೊಲೀಸರು ಪಾಲಿಸುತ್ತಿಲ್ಲ. ಈ ಕುರಿತು ಅರ್ಜಿದಾರರು 2022ರ ಸೆ.19ರಂದು ದೂರು ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಎಫ್‍ಐಆರ್ ಅನ್ನು 24 ಗಂಟೆಗಳಲ್ಲಿ ವೆಬ್‍ಸೈಟ್‍ನಲ್ಲಿ ಹಾಕಿದರೆ ದೂರುದಾರರು, ಕಕ್ಷಿದಾರರು ಮತ್ತು ವಕೀಲರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಓದಿ>>> ನನ್ನ ಹೆಸರೆತ್ತದೆ 5 ನಿಮಿಷ ಭಾಷಣ ಮಾಡಿ: ಬಿಎಸ್ ವೈ, ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲು