ಮುರುಘಾ ಶರಣರ ಪವರ್ ಆಫ್ ಅಟಾರ್ನಿಯನ್ನು ಮತ್ತೊಬ್ಬರಿಗೆ ವರ್ಗಾಯಿಸಿ: ಹೈಕೋರ್ಟ್ ಸೂಚನೆ
ಬೆಂಗಳೂರು, ಅ.12: ಚಿತ್ರದುರ್ಗದ ಮುರುಘಾ ಮಠ ಮತ್ತು ವಿದ್ಯಾ ಸಂಸ್ಥೆಗಳ ವಿಶೇಷ ಪವರ್ ಆಫ್ ಅಟಾರ್ನಿಯನ್ನು ಮತ್ತೊಬ್ಬರಿಗೆ ವರ್ಗಾಯಿಸಿ ಅದರ ಎಲ್ಲ ಪ್ರತಿಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್, ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಶರಣರಿಗೆ ಸೂಚನೆ ನೀಡಿದೆ.
ಕೇಸ್ ಸಂಬಂಧ ಪವರ್ ಆಫ್ ಅಟಾರ್ನಿಯನ್ನು ಮತ್ತೊಬ್ಬರಿಗೆ ವರ್ಗಾವಣೆಗೆ ಮಾಡುವುದಕ್ಕೆ ಸ್ಪಷ್ಟನೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಸೂಚನೆ ನೀಡಿದೆ.
ಪವರ್ ಆಫ್ ಅಟಾರ್ನಿ ವರ್ಗಾವಣೆಗೆ ಕೋರಿರುವ ಮನವಿಯನ್ನು ಅರ್ಜಿದಾರರು ಕಾರಾಗೃಹ ಅಧೀಕ್ಷಕರಿಗೆ ಸಲ್ಲಿಸಬೇಕು. ಆ ಮನವಿಯನ್ನು ಕಾರಾಗೃಹ ಅಧೀಕ್ಷಕರು ಪರಿಗಣಿಸಬೇಕು. ಪವರ್ ಆಫ್ ಅಟಾರ್ನಿ ವರ್ಗಾಯಿಸಿದ ನಂತರ ಆ ಕುರಿತ ದಾಖಲೆಗಳನ್ನು ಪೋಕ್ಸೋ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಚಾರಣಾ ಕೋರ್ಟ್‍ಗೆ ಸಲ್ಲಿಸಬೇಕು ಎಂದು ಪೀಠವು ತಿಳಿಸಿದೆ.
ಮುರುಘಾ ಮಠದ ವಿದ್ಯಾ ಸಂಸ್ಥೆಗಳ ನೌಕರರು ಮತ್ತು ಇತರೆ ಸಿಬ್ಬಂದಿಗೆ ಸಂಬಳ ನೀಡುವುದಕ್ಕಾಗಿ ಕಾರಾಗೃಹದಿಂದಲೇ ಒಟ್ಟು 200 ಚೆಕ್‍ಗಳಿಗೆ ಸಹಿ ಹಾಕಲು ಅ.3, 6 ಮತ್ತು 9ರಂದು ಮುರುಘಾ ಶರಣರಿಗೆ ಹೈಕೋರ್ಟ್ ಅನುಮತಿ ನೀಡಿತ್ತು. ಜತೆಗೆ, ಮುಂದಿನ ದಿನಗಳಲ್ಲಿ ವಿದ್ಯಾಸಂಸ್ಥೆಗಳ ಪವರ್ ಆಫ್ ಅಟಾರ್ನಿಯನ್ನು ವರ್ಗಾಯಿಸಲು ಸೂಚನೆ ನೀಡಿತ್ತು. ಈ ಹಿನ್ನೆಲೆ ಅಟಾರ್ನಿ ವರ್ಗಾವಣೆಗೆ ಮುರುಘಾ ಶರಣರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.