ಭೂ ಸ್ವಾಧೀನದ ಪರಿಹಾರ ಧನ ಪಾವತಿಸದ ಆರೋಪ; ಮಂಗಳೂರು ಮೇಯರ್ ಮತ್ತು ಭೂಸ್ವಾಧೀನ ವಿಭಾಗದ ಕಚೇರಿ ಜಪ್ತಿಗೆ ಯತ್ನ
ಮಂಗಳೂರು, ಅ.12: ಭೂ ಸ್ವಾಧೀನದ ಪರಿಹಾರ ಧನ ಪಾವತಿಸದ ಕಾರಣ ನ್ಯಾಯಾಲಯದ ಆದೇಶದಂತೆ ಮಂಗಳೂರು ಮೇಯರ್ ಮತ್ತು ಭೂಸ್ವಾಧೀನ ವಿಭಾಗದ ಕಚೇರಿಯನ್ನು ನ್ಯಾಯಾಲಯದ ಅಧಿಕಾರಿಗಳು ಜಪ್ತಿ ಮಾಡಲು ಮುಂದಾದ ಘಟನೆ ಬುಧವಾರ ನಡೆದಿದೆ.
ನಗರದ ಪಂಪ್‌ವೆಲ್‌ನಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಭೂಸ್ವಾಧೀನ ಪಡಿಸಿ ಪರಿಹಾರ ಪಾವತಿಸದ ಕಾರಣ ಮಂಗಳೂರು ಹಿರಿಯ ಪ್ರಧಾನ ನ್ಯಾಯಾಲಯದ ಆದೇಶ ಮೇರೆಗೆ ಅಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭ ಪಾಲಿಕೆ ಆಯುಕ್ತರು ಮಂಗಳೂರಿನ ಹಿರಿಯ ಪ್ರಧಾನ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಪರಿಹಾರ ಪಾವತಿಗೆ ಅ.25ರ ವರೆಗೆ ಗಡುವು ಕೋರಿದ್ದರು. ಅದರಂತೆ ಜಪ್ತಿ ಪ್ರಕ್ರಿಯೆಯನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಮುಂದೂಡಿರುವುದಾಗಿ ವರದಿಯಾಗಿದೆ.
ಪಂಪ್‌ವೆಲ್‌ನಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣಕ್ಕೆ 2008ರಲ್ಲಿ ಸುಮಾರು 10 ಎಕರೆ ಜಾಗವನ್ನು ಸ್ವಾಧೀನಪಡಿಸಲಾಗಿತ್ತು. ಅದರಲ್ಲಿ ಮೂರು ಎಕರೆ ಜಮೀನಿಗೆ ಮಾತ್ರ ಭೂಸ್ವಾಧೀನದ ಪರಿಹಾರ ಮೊತ್ತ ಪಾವತಿಸಲಾಗಿತ್ತು.
ಪರಿಹಾರ ಮೊತ್ತ ಸಿಗದಿರುವ ನಾಲ್ಕೈದು ಮಂದಿ ನ್ಯಾಯಾಲಯದ ಮೊರೆ ಹೋಗಿದ್ದರು. ಸ್ಥಳೀಯ ನಿವಾಸಿ ರಾಜೀವಿ ಪದ್ಮಪ್ಪ ಮತ್ತಿತರರ ಏಳು ಎಕರೆ ಜಾಗದ ಪರಿಹಾರ ಮೊತ್ತವನ್ನು ಪಾಲಿಕೆ ಪಾವತಿಸಲು ಬಾಕಿ ಇಟ್ಟಿತ್ತು. ಈ ಪೈಕಿ 1.49 ಎಕರೆ ಜಾಗಕ್ಕೆ 3.48 ಕೋ. ರೂ.ಪರಿಹಾರದ ಮೊತ್ತ ಪಾವತಿಗೆ ಕೋರಿ ದಿ. ರಾಜೀವಿ ಪದ್ಮಪ್ಪರ ಕುಟುಂಬಸ್ಥರು ಮಂಗಳೂರಿನ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಾಕಿ ಮೊತ್ತ ಪಾವತಿಸುವಂತೆ ಪಾಲಿಕೆಗೆ 2019ರಲ್ಲೇ ಸೂಚಿಸಿತ್ತು. ಆದರೆ ಪಾಲಿಕೆ ಅಧಿಕಾರಿಗಳು ಪರಿಹಾರ ಮೊತ್ತ ನೀಡುವುದಾಗಿ ಹೇಳುತ್ತಲೇ ಕಾಲಹರಣ ಮಾಡಿದ್ದರು. ಇದರಿಂದ ನೊಂದ ರಾಜೀವಿ ಪದ್ಮಪ್ಪರ ಕುಟುಂಬಸ್ಥರು ಆದೇಶ ಪಾಲಿಸದಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆದಿದ್ದರು.
ಈ ವೇಳೆ ಶಾಸಕರು, ಮೇಯರ್, ಮಾಜಿ ಮೇಯರ್, ಭೂಸ್ವಾಧೀನ ಅಧಿಕಾರಿ, ಕಂದಾಯ ಅಧಿಕಾರಿ, ಪಾಲಿಕೆ ಆಯುಕ್ತರ ಸಹಿತ ಜಿಲ್ಲಾಡಳಿತದ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರಕ್ಕೆ ಯತ್ನಿಸಿದ್ದರೂ ಪರಿಹಾರದ ಮೊತ್ತ ಪಾವತಿಯಾಗಿರಲಿಲ್ಲ. ಇದರಿಂದಾಗಿ ಸಂತ್ರಸ್ತರ ಕುಟುಂಬದ ಸದಸ್ಯರು ನ್ಯಾಯಾಲಯದ ಮೊರೆ ಹೋಗಿ ಪಾಲಿಕೆಯ ಸೊತ್ತು ಜಪ್ತಿ ಮಾಡಿ ಪರಿಹಾರ ಪಾವತಿಸಲು ಸೂಚಿಸುವಂತೆ ಮನವಿ ಮಾಡಿದ್ದರು.
ನ್ಯಾಯಾಲಯದ ಸೂಚನೆ ಮೇರೆಗೆ ನ್ಯಾಯಾಲಯದ ಅಧಿಕಾರಿಗಳು ಅ.10ರಂದು ಪಾಲಿಕೆಗೆ ತೆರಳಿ ನೋಟಿಸ್ ಜಾರಿಗೊಳಿಸಿದ್ದರು. ಪರಿಹಾರ ಮೊತ್ತ ಪಾವತಿಸದಿದ್ದರೆ ಭೂಸ್ವಾಧೀನ ವಿಭಾಗ ಹಾಗೂ ಆಯುಕ್ತರ ಕಚೇರಿ ಜಪ್ತಿ ಮಾಡುವುದಾಗಿ ತಿಳಿಸಿದ್ದರು. ಅ.11ರವರೆಗೂ ಪರಿಹಾರ ಮೊತ್ತ ಪಾವತಿಯಾಗದ ಕಾರಣ ಬುಧವಾರ ಪಾಲಿಕೆ ಕಚೇರಿಗೆ ತೆರಳಿದ ನ್ಯಾಯಾಲಯದ ಅಧಿಕಾರಿಗಳು ಭೂಸ್ವಾಧೀನ ವಿಭಾಗ ಹಾಗೂ ಆಯುಕ್ತರ ಕಚೇರಿ ಜಫ್ತಿಗೆ ಮುಂದಾದರು.
ವಿಚಾರ ತಿಳಿದ ಪಾಲಿಕೆ ಆಯುಕ್ತರು ತೆರೆದ ಕೋರ್ಟ್‌ಗೆ ವಕೀಲರ ಮೂಲಕ ಮನವಿ ಸಲ್ಲಿಸಿ ಜಪ್ತಿ ಮುಂದೂಡಿಕೆಗೆ ತಾತ್ಕಾಲಿಕ ಅನುಮತಿ ಪಡೆದುಕೊಂಡರು.
*ಪರಿಹಾರ ತೃಪ್ತಿಕರವಾಗಿಲ್ಲ ಎಂದು ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಿದ್ದರು. 2019ರಲ್ಲಿ ಪರಿಹಾರ ನೀಡುವಂತೆ ಜಿಲ್ಲಾ ನ್ಯಾಯಾಲಯದ ನೀಡಿದ ಆದೇಶ ಪ್ರಶ್ನಿಸಿ ಪಾಲಿಕೆಯು ಹೈಕೋರ್ಟ್ ಮೆಟ್ಟಿಲೇರಿದೆ. ಈ ವೇಳೆ ಸೊತ್ತು ಜಪ್ತಿಯ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿತ್ತು. ಆದರೆ ಈ ಕುರಿತ ಮೇಲ್ಮನವಿಯ ವಿಚಾರಣೆ ಇನ್ನೂ ಹೈಕೋರ್ಟ್‌ನಲ್ಲಿಗೆ. ಹೀಗಾಗಿ ಅ.25ರವರೆಗೆ ಸೊತ್ತು ಜಪ್ತಿಯನ್ನು ಮುಂದೂಡುವಂತೆ ಮಂಗಳೂರು ನ್ಯಾಯಾಲಯದಲ್ಲಿ ಕಾಲಾವಕಾಶ ಕೇಳಿದ್ದೇವೆ.
- ಅಕ್ಷಯ್ ಶ್ರೀಧರ್, ಆಯುಕ್ತರು,
ಮಹಾನಗರ ಪಾಲಿಕೆ, ಮಂಗಳೂರು