ಮಡಿಕೇರಿ: ಬೇಟೆಗೆಂದು ತೆರಳಿದ್ದ ನಾಲ್ವರಲ್ಲಿ ಓರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಮಡಿಕೇರಿ: ಬೇಟೆಗೆಂದು ತೆರಳಿದ್ದ ನಾಲ್ವರಲ್ಲಿ ಓರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೈಲುಕೊಪ್ಪ ಸಮೀಪದ ಬೆಟ್ಟಗೇರಿ ಬಾಳುಗೋಡು ವ್ಯಾಪ್ತಿಯಲ್ಲಿ ನಡೆದಿದೆ.
ಕುಶಾಲನಗರ ಸಮೀಪದ ನಂಜರಾಯಪಟ್ಟಣ ಗ್ರಾ.ಪಂ ವ್ಯಾಪ್ತಿಯ ವಿರುಪಾಕ್ಷಪುರ ನಿವಾಸಿ ಆಟೋ ಚಾಲಕ ವಿನೋದ್ (29) ಮೃತ ವ್ಯಕ್ತಿ.
ಧರ್ಮ, ಯೋಗೇಶ್ ಹಾಗೂ ಈಶ್ವರ ಎಂಬುವವರೊಂದಿಗೆ ವಿನೋದ್ ಗ್ರಾಮದ ನದಿ ದಾಟಿ ಬೈಲುಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿಗೆ ಬೇಟೆಗೆ ತೆರಳಿದ್ದರು ಎಂದು ಆರೋಪಿಸಲಾಗಿದೆ.
ಮೂವರು ಹಿಂತಿರುಗಿದರೂ ವಿನೋದ್ ಮರಳಿ ಬಾರದ ಹಿನ್ನೆಲೆಯಲ್ಲಿ ಆತನ ಪತ್ನಿ ಅನುಷಾ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಬಗ್ಗೆ ದೂರು ದಾಖಲಿಸಿದ್ದರು. ಈ ನಡುವೆ ಯೋಗೇಶ್ ಹಾಗೂ ಈಶ್ವರ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಧರ್ಮ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಗುರುವಾರ ಬೆಳಗ್ಗೆ ಕಾವೇರಿ ನದಿ ದಂಡೆಯಲ್ಲಿ ವಿನೋದನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.