ಆ್ಯಪ್ ಆಧಾರಿತ ಟ್ಯಾಕ್ಸಿ: ಸೂಕ್ತ ದರ ವಿಚಾರದಲ್ಲಿ ಒಮ್ಮತ ಸಾಧಿಸಲು ಹೈಕೋರ್ಟ್ ಸೂಚನೆ

Update: 2022-10-13 15:37 GMT

ಬೆಂಗಳೂರು: ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪೆನಿಗಳು ಕಲ್ಪಿಸಿರುವ ಆಟೋರಿಕ್ಷಾಗಳ ಸೇವೆಗೆ ಸೂಕ್ತ ದರ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಕಂಪೆನಿಗಳ ಜತೆ ಸಭೆ ನಡೆಸಿ, ಒಮ್ಮತದ ಅಭಿಪ್ರಾಯವನ್ನು ತಿಳಿಸುವಂತೆ ಸರಕಾರ ಹಾಗೂ ಆ್ಯಪ್ ಕಂಪೆನಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿಕೆ ಮಾಡಿದೆ.     

ಆಟೋರಿಕ್ಷಾಗಳು ಆ್ಯಪ್ ಮೂಲಕ ಸಲ್ಲಿಸುತ್ತಿದ್ದ ಸೇವೆಯನ್ನು ಸ್ಥಗಿತಗೊಳಿಸಿದ ಸಾರಿಗೆ ಇಲಾಖೆ ಕ್ರಮವನ್ನು ಪ್ರಶ್ನಿಸಿ ಎಎನ್‍ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಸೂಚನೆ ನೀಡಿದೆ.

ಅರ್ಜಿದಾರರ ಪರ ವಾದಿಸಿದ ವಕೀಲರು, ಆ್ಯಪ್ ಮೂಲಕ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಿರುವುದಕ್ಕೆ ರಾಜ್ಯ ಸರಕಾರವು ಸೂಕ್ತವಾದ ಕಾರಣಗಳನ್ನು ನೀಡಿಲ್ಲ. ದರ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಸರಕಾರವು ಇಲ್ಲಿಯವರೆಗೆ ನಿಯಮವನ್ನೂ ರೂಪಿಸಿಲ್ಲ. ಹೀಗಿರುವಾಗ ಇಷ್ಟೇ ದರ ನಿಗದಿಪಡಿಸಬೇಕು ಎಂದು ಸರಕಾರವು ಹೇಗೆ ಸೂಚಿಸುತ್ತದೆ ಎಂಬ ವಿವರವನ್ನು ಪೀಠಕ್ಕೆ ತಿಳಿಸಿದರು.  

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದಿಸಿ, ಆ್ಯಪ್ ಆಧಾರಿತ ಆಟೋರಿಕ್ಷಾಗಳು ಸಾರ್ವಜನಿಕರಿಂದ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿವೆ. ಸೇವೆ ಒದಗಿಸಲು ಯಾವುದೇ ಪರವಾನಗಿ ಪಡೆದುಕೊಂಡಿಲ್ಲ. ಹೀಗಾಗಿ, ನೋಟಿಸ್ ಜಾರಿಗೊಳಿಸಿ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಅರ್ಜಿದಾರರೊಂದಿಗೆ ತುರ್ತು ಸಭೆ ನಡೆಸಿ, ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಿ ಕೋರ್ಟ್ ಗೆ ಮಾಹಿತಿ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಅ.14ರ ಬೆಳಗ್ಗೆ 10.30ಕ್ಕೆ ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News