ಅಂತರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಯುಕ್ತ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಅಣುಕು ಕಾರ್ಯಾಚರಣೆ
ಕೊಣಾಜೆ: ದ.ಕ ಜಿಲ್ಲಾಡಳಿತ, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ , ಅಗ್ನಿ ಶಾಮಕ ದಳ ಸಹಯೋಗದೊಂದಿಗೆ ನಿಟ್ಟೆ ಜಸ್ಟಿಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಯ ಫೈರ್ ಆ್ಯಂಡ್ ಸೇಫ್ಟಿ ವಿಭಾಗದ ಆಶ್ರಯದಲ್ಲಿ ಅಂತರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಯುಕ್ತ ಅಣುಕು ಕಾರ್ಯಾಚರಣೆಯು ಆಸ್ಪತ್ರೆ ಕಟ್ಟಡದಲ್ಲಿ ಗುರುವಾರ ನಡೆಯಿತು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ಕುಮಾರ್ ಎಂ ಅವರು ಅಣುಕು ಕಾರ್ಯಾಚರಣೆಯ ಬಳಿಕ ಮಾತನಾಡಿ, ಆಸ್ಪತ್ರೆಗಳಲ್ಲಿ ವಿಪತ್ತು ನಿರ್ವಹಣಾ ಜಾಗೃತಿ ಪರಿಣಾಮಕಾರಿಯಾಗಿ ನಡೆಯಬೇಕಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿ ಕ್ಷೇಮ ಆಸ್ಪತ್ರೆ ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಸುರಕ್ಷಾ ತಂಡವನ್ನು ಸೇರಿಸಿಕೊಂಡು ನಡೆಸಿರುವ ಅಣುಕು ಕಾರ್ಯಾಚರಣೆ ಮಾದರಿ ಕಾರ್ಯ ಎಂದು ಅಭಿಪ್ರಾಯಪಟ್ಟರು.
ಅಣುಕು ಕಾರ್ಯಾಚರಣೆ ವೇಳೆ ತಪ್ಪುಗಳಾಗುವುದು ಸಹಜ. ಆದರೆ ನೈಜ ದುರಂತಗಳು ಸಂಭವಿಸಿದಾಗ ತಪ್ಪುಗಳನ್ನು ಸರಿಪಡಿಸಲು ಅಣುಕು ಕಾರ್ಯಾಚರಣೆ ಸಹಕಾರಿ. ಕೋವಿಡ್ ಸಂದರ್ಭ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಐಸಿಯುಗಳಲ್ಲಿ ಉಂಟಾದ ಶಾಟ್೯ ಸಕ್ರ್ಯುಟ್ ನಿಂದ ಹಲವು ಜೀವಗಳನ್ನು ಕಳೆದುಕೊಂಡಿದ್ದೆವು. ಈ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ವಿಪತ್ತು ನಿರ್ವಹಣಾ ಕಾರ್ಯದ ಮೆಲುಕು ಹಾಕುವಿಕೆ ಅತ್ಯಗತ್ಯ.ಜಿಲ್ಲೆಯಾದ್ಯಂತ ಇತರೆ ಆಸ್ಪತ್ರೆಗಳಲ್ಲಿಯೂ ಇಂತಹ ಅಣುಕು ಕಾರ್ಯಾಚರಣೆಗಳು ನಡೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ , ವಿಪತ್ತು ನಿರ್ವಹಣೆ ಸಂದರ್ಭ ಎಲ್ಲರೂ ಒಗ್ಗಟ್ಟಾಗಿ ಪಾಲ್ಗೊಳ್ಳುವಿಗೆ ಅಗತ್ಯ. ಒಬ್ಬರಿಗೊಬ್ಬರು ಕೈಜೋಡಿಸುವ ಮೂಲಕ ಎಂತಹ ಸಂದರ್ಭವನ್ನು ಎದುರಿಸಬಹುದು. ನಿಟ್ಟೆ ಫೈರ್ ಆಂಡ್ ಸೇಫ್ಟಿ ವಿಭಾಗ ಪರಿಣಾಮಕಾರಿಯಾಗಿ ವಿವಿಧ ಕಾರ್ಯಗಳನ್ನು ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಅಧಿಕಾರಿ ವಿಜಯ್ ಕುಮಾರ್ ಪೂಜಾರ್, ನಿಟ್ಟೆ ತಾಂತ್ರಿಕ ಸಂಶೋಧನಾ ವಿಭಾಗ ಮುಖ್ಯಸ್ಥ ಡಾ.ಜಿ ಶ್ರೀನಿಕೇತನ್ ,ಜಿಲ್ಲಾ ಅಗ್ನಿ ಶಾಮಕ ದಳ ಅಧಿಕಾರಿ ಮಹಮ್ಮದ್ ನವಾಝ್ ,ಎಸ್ ಡಿ ಆರ್ ಎಫ್ ಡೆಪ್ಯುಟಿ ಕಮಾಂಡೆಂಟ್ ಶರತ್ ಎಂ.ವಿ, ಎನ್ ಡಿ ಆರ್ ಎಫ್ ಟೀಂ ಕಮಾಂಡರ್ ಶಿವು ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ವೀಕ್ಷಕರುಗಳಾಗಿ ನರ್ಸಿಂಗ್ ಸುಪರಿಟೆಂಡೆಂಟ್ ಡಾ.ಜಗದೀಶ್, ಜಿಲ್ಲಾ ಕುಷ್ಠರೋಗಿ ನಿವಾರಣಾ ಅಧಿಕಾರಿ ಡಾ.ಸುದರ್ಶನ್ ಮುಂಡ್ಕೂರು, ಮಾನಸಿಕ ರೋಗಿಗಳ ವಿಭಾಗದ ಡಾ.ಸತೀಶ್ ರಾವ್ ಭಾಗವಹಿಸಿದ್ದರು.
ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್ ಶೆಟ್ಟಿ ಸ್ವಾಗತಿಸಿದರು. ನಿಟ್ಟೆ ಫೈರ್ ಆಂಡ್ ಸೇಫ್ಟಿ ಅಧಿಕಾರಿ ಪ್ರಶಾಂತ್ ಕಾಮತ್ ವಂದಿಸಿದರು. ವಿಘ್ನೇಶ್ ದಿಲಿಪ್ ನಿರೂಪಿಸಿದರು.
ವಿದ್ಯಾರ್ಥಿನಿಯರಾದ ರಿಷಾಲ್, ರಿಷಾ,ಅಮಲ, ಅನು ಥೋಮಸ್ ಅಣುಕು ಕಾರ್ಯಾಚರಣೆ ವೇಳೆ ಸಹಕರಿಸಿದರು.
ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಸಕ್ರಿಯರಾಗು ತ್ತಾರೆ. ಎನ್ ಡಿಆರ್ ಎಫ್ ತಂಡದ ಇಬ್ಬರು ಸದಸ್ಯರು ಕಟ್ಟಡದ ಎರಡನೇ ಮಹಡಿಗೆ ಹೊರಗಿನಿಂದಲೇ ಹತ್ತಿ ಒಳನುಗ್ಗಿ ಮೂವರು ರೋಗಿಗಳನ್ನು ಅಲ್ಲಿಂದಲೇ ಕೆಳಗಿಳಿಸಿ ರಕ್ಷಿಸಿದರು. ಆ ಮಹಡಿಯಲ್ಲಿದ್ದ ಒಟ್ಟು 36 ಮಂದಿ ರೋಗಿಗಳನ್ನು ರಕ್ಷಣಾ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದರು. ನೈಜ ಘಟನೆಯೆಂದೇ ಭಾವಿಸಿದ್ದ ಹಲವರು ಕೊನೆಗೆ ನಿಟ್ಟುಸಿರು ಬಿಟ್ಟರು.