ಚಿಕ್ಕಮಗಳೂರು: ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಪ್ರಕರಣ; ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಧರಣಿ

Update: 2022-10-13 18:15 GMT

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹುಣಸೇಹಳ್ಳಿ ಪುರ ಗ್ರಾಮದಲ್ಲಿ ಕಾಫಿ ಎಸ್ಟೇಟ್ ಮಾಲಕ ಕೂಲಿ ಕೆಲಸ ಮಾಡಿಕೊಂಡಿದ್ದ ಗರ್ಭಿಣಿ ಸೇರಿದಂತೆ ದಲಿತ ಸಮುದಾಯದ ಕೂಲಿ ಕಾರ್ಮಿಕ ಕುಟುಂಬಗಳ ಮೇಲೆ ದೌರ್ಜನ್ಯ ನಡೆಸಿರುವ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ವಿವಿಧ ದಲಿತ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ಗುರುವಾರ ಬಾಳೆಹೊನ್ನೂರು ಪಟ್ಟಣದಲ್ಲಿ ಬೃಹತ್ ಧರಣಿ ನಡೆಸಿದರು.

ಗುರುವಾರ ಬೆಳಗ್ಗೆ ಜಿಲ್ಲಾ ಆದಿ ದ್ರಾವಿಡ ಸೇವಾ ಸಂಘ, ದಲಿತ ಮತ್ತು ಪ್ರಗತಿಪರ ಸಂಘಗಳ ಒಕ್ಕೂಟ, ದಸಂಸ, ಸಿಪಿಐ ರೆಡ್ ಸ್ಟಾರ್, ಭೀಮ್ ಆರ್ಮಿ ಸೇರಿದಂತೆ ಹಲವು ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ವಿವಿಧ ತೋಟಗಳ ಕೂಲಿಕಾರ್ಮಿಕರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿ ಗರ್ಭಿಣಿ ಮಹಿಳೆಯ ಗರ್ಭಪಾತಕ್ಕೆ ಕಾರಣವಾಗಿದ್ದರೆನ್ನಲಾದ ಜಗದೀಶ್ ಗೌಡ ಹಾಗೂ ಆತನ ಮಗ ತಿಲಕ್ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ಗಿರೀಶ್, ತನ್ನ ತೋಟಕ್ಕೆ ಕೆಲಸಕ್ಕೆ ಬಂದಿದ್ದ ದಲಿತ ಸಮುದಾಯದ ಕೂಲಿ ಕಾರ್ಮಿಕ ಕುಟುಂಬಗಳ ಸದಸ್ಯರು ಸಾಲ ಪಡೆದ ಹಣವನ್ನು ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ಕಾಫಿ ಎಸ್ಟೇಟ್ ಮಾಲಕ ಹಾಗೂ ಆತನ ಮಗ ಗರ್ಭಿಣಿ ಮಹಿಳೆ, ಮಕ್ಕಳು ಸೇರಿದಂತೆ ಸುಮಾರು 14 ಮಂದಿ ಕಾರ್ಮಿಕರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಲ್ಲದೇ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಗರ್ಭಿಣಿ ಮಹಿಳೆಯ ಹೊಟ್ಟೆಗೆ ಗಾಯವಾಗಿ ಗರ್ಭಪಾತ ಆಗಿದೆ. ಈ ದೌರ್ಜನ್ಯದ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ನೊಂದ ಕಾರ್ಮಿಕರು ದೂರು ನೀಡಲು ಬಂದಾಗ ಠಾಣಾಧಿಕಾರಿ ಕಾರ್ಮಿಕರನ್ನೇ ಹೆದರಿಸಿ ಕಳುಹಿಸಿದ್ದಾರೆ. ದಲಿತ ಮುಖಂಡರ ಮಧ್ಯ ಪ್ರವೇಶದ ಬಳಿಕ ದೂರು ದಾಖಲಿಸಿದ್ದಾರೆ. ಎಫ್‍ಐಆರ್ ದಾಖಲಾಗಿ 3 ದಿನವಾದರೂ ಆರೋಪಿಗಳನ್ನು ಬಂಧಿಸಿಲ್ಲ. ಬದಲಾಗಿ ಪೊಲೀಸರು ನೊಂದ ಕಾರ್ಮಿಕರ ವಿರುದ್ಧವೇ ದೂರು ದಾಖಲಿಸಿದ್ದಾರೆ. ಈ ಮೂಲಕ ಪೊಲೀಸರು ಎಸ್ಟೇಟ್ ಮಾಲಕನ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪೊಲೀಸರು ಆರೋಪಿಗಳನ್ನು ಉದ್ದೇಶಪೂರ್ವಕವಾಗಿ ಬಂದಿಸಲು ಮುಂದಾಗುತ್ತಿಲ್ಲ. ಆರೋಪಿಗಳ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿ ತೋಟದ ಮಾಲಕರನ್ನು ರಕ್ಷಣೆ ಮಾಡಲು ಸಂಚು ನಡೆಯುತ್ತಿದೆ. ದಲಿತ ಮೇಲೆ ದೌರ್ಜನ್ಯ ನಡೆಸಿದ ಆರೋಪಿಗಳು ರಾಜಕೀಯ ಪಕ್ಷವೊಂದರ ಕಾರ್ಯಕರ್ತರಾಗಿದ್ದು, ರಾಜಕಾರಣಿಗಳ ಒತ್ತಡಕ್ಕೆ ಪೊಲೀಸರು ಮಣಿದಿದ್ದಾರೆ ಎಂದು ಆರೋಪಿಸಿದ ಅವರು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಹಲ್ಲೆಗೊಳಗಾದ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು. ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಅವರು ಸ್ಥಳಕ್ಕೆ ಬಂದು ಸೂಕ್ತ ಭರವಸೆ ನೀಡಬೇಕು, ಅಲ್ಲಿಯವರೆಗೂ ಧರಣಿ ಕೈಬಿಡಲ್ಲ ಎಂದು ಆಗ್ರಹಿಸಿದರು.

ಹಲ್ಲೆಗೊಳಗಾದ ಕಾರ್ಮಿಕ ಕುಟುಂಬದ ಸದಸ್ಯೆ ರೂಪಾ ಮಾತನಾಡಿ, 9 ಲಕ್ಷ ಸಾಲವನ್ನು ತಕ್ಷಣವೇ ಪಾವತಿಸುವಂತೆ ಜಗದೀಶ್ ಗೌಡ ಹಾಗೂ ಮಗ ತಿಲಕ್ ಒತ್ತಾಯಿಸಿದರು. ನಮ್ಮನ್ನು ಕೂಡಿಹಾಕಿ ಕೆಲವರನ್ನು ಹಣ ತರುವಂತೆ ಕಳುಹಿಸಿದರು. ಏಕಾಏಕಿ 9 ಲಕ್ಷ ಹಣವನ್ನು ಬಡ್ಡಿ ಸಮೇತ ನೀಡುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದೇವೆ. ಈ ವೇಳೆ ಕೋಪಗೊಂಡ ಎಸ್ಟೇಟ್ ಮಾಲಕ ಮೊಬೈಲ್ ಕಿತ್ತುಕೊಂಡು, ಮಹಿಳೆಯರು, ಮಕ್ಕಳು ಎನ್ನದೇ ನಿಂದಿಸಿ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡಲು ಹೋದಾಗಲೂ ನಮ್ಮನ್ನೇ ಹೆದರಿಸಿ ಕಳುಹಿಸಿದ್ದಾರೆ. ಗರ್ಭಿಣಿಯನ್ನ ತಳ್ಳಿದ್ದರಿಂದ ಆಕೆ ಹೊಟ್ಟೆಗೆ ಏಟು ಬಿದ್ದು ಗರ್ಭಪಾತವಾಗಿದೆ. ನಮಗೆ ನ್ಯಾಯ ಬೇಕು ಎಂದು ಅಳಲು ತೋಡಿಕೊಂಡರು.

ಈ ವೇಳೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಅವರು ಕೆಲಸದ ಒತ್ತಡದಿಂದ ಸ್ಥಳಕ್ಕೆ ಬರುವುದಿಲ್ಲ ಎಂದು ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದ ಧರಣಿ ನಿರತರು ಮತ್ತಷ್ಟು ಆಕ್ರೋಶಗೊಂಡ ಪೊಲೀಸ್ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಸ್ತೆ ತಡೆ ಮಾಡಿ ಸಂಚಾರಕ್ಕೆ ಅಡ್ಡಿ ಪಡಿಸಿದರು. ಈ ಸಂದರ್ಭದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಭಾರಿ ಮಳೆ ಸುರಿದಿದ್ದು, ಮಳೆಯ ನಡುವೆಯೂ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 

ಬಳಿಕ ಎಎಸ್ಪಿ ಗುಂಜನ್ ಆರ್ಯ, ವೃತ್ತ ನಿರೀಕ್ಷಕ ವಸಂತ್ ಶಂಕರ್ ಭಗವತ್ ಅವರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಮುಂದಿನ ಎರಡು ದಿನಗಳೊಳಗೆ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಆದರೂ ಪಟ್ಟು ಸಡಿಲಿಸದ ಪ್ರತಿಭಟನಾಕಾರರ ಆಕ್ರೋಶ ಕಡಿಮೆಯಾಗಿರಲಿಲ್ಲ. ಮತ್ತೆ ಮಾತುಕತೆ ನಡೆಸಿದ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಮನವರಿಕೆ ಮಾಡಿದರು. ಬಳಿಕ ಧರಣಿ ನಿರತರು ಆರೋಪಿಗಳನ್ನು ಎರಡು ದಿನಗಳಲ್ಲಿ ಬಂಧಿಸದಿದ್ದಲ್ಲಿ ಮತ್ತೆ ಧರಣಿ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿ ಧರಣಿ ಹಿಂಪಡೆದರು.

ಸಿ.ಪಿ.ಐ.ಎಂ.ಎಲ್ ರೆಡ್ ಸ್ಟಾರ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶೇಖರ್, ದಸಂಸ ಜಿಲ್ಲಾ ಮುಖಂಡ ಶಿವಣ್ಣ, ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂದ ಜಿಲ್ಲಾಧ್ಯಕ್ಷ ಹೊನ್ನಪ್ಪ, ಸಿ.ಪಿ.ಐ ಪಕ್ಷದ ಕಳಸಪ್ಪ, ಗೋಪಾಲಶೆಟ್ಟಿ, ರಾಜ್ಯ ಆದಿವಾಸಿ ಮೂಲ ವೇಧಿಕೆಯ ಕೆ.ಎನ್.ವಿಠ್ಠಲ್, ಆದಿದ್ರಾವಿಡ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ಬೀಮ್ ಆರ್ಮಿಯ ತಾಲೂಕು ಅಧ್ಯಕ್ಷ  ನಾಗರಾಜ್, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಕೌಳಿ ರಾಮು, ಬೀಮ್ ಆರ್ಮಿ ಮಹಿಳಾ ಘಟಕದ ಹೋಬಳಿ ಅಧ್ಯಕ್ಷೆ ಭವಾನಿ, ಸೇರಿದಂತೆ ನೂರಾರು ಜನ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಠಾಣಾಧಿಕಾರಿ ನಿತ್ಯಾನಂದಗೌಡ ಸೇರಿದಂತೆ ಕೊಪ್ಪ ವಿಭಾಗದ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿ ಈ ವೇಳೆ ಸ್ಥಳದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News