ಮಂಗಳೂರು: ತುಳು ಅಕಾಡೆಮಿ ಆವರಣದಲ್ಲಿ ಬಯಲು ರಂಗ ಮಂದಿರ ಉದ್ಘಾಟನೆ

Update: 2022-10-14 12:33 GMT

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆವರಣದಲ್ಲಿ ನಿರ್ಮಿಸಲಾದ ಬಯಲು ರಂಗಮಂದಿರವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿಸಲು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲು, ಸಚಿವ ಸುನಿಲ್‌ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಪ್ರತಿಭಟನೆಯ ಹಾದಿ ಹಿಡಿದರೆ ಹಿನ್ನಡೆ ಆಗುತ್ತದೆ. ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸವನ್ನು ಬುದ್ದಿವಂತಿಕೆಯಿಂದ ಸಾಧಿಸಬೇಕಿದೆ. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ಯಡಿಯೂರಪ್ಪ ಅವರ ನೇತೃತ ಹಾಗೂ ಬಳಿಕದ ಬಿಜೆಪಿ ಸರಕಾರದ ಅವಧಿಯಲ್ಲಿ ತುಳು ಅಕಾಡೆಮಿಗೆ ಗರಿಷ್ಠ ಅನುದಾನ ದೊರೆತಿದೆ. ತುಳುಭವನದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುದಾನ ಅಗತ್ಯವಿದೆ ಎಂಬ ಬೇಡಿಕೆಯಿದೆ. ಇದಕ್ಕಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ 50 ಲಕ್ಷ ರೂ., ಮಂಗಳೂರು ಮಹಾನಗರ ಪಾಲಿಕೆ 20 ಲಕ್ಷ ರೂ. ನೀಡಬೇಕು. ಶಾಸಕರ ನಿಧಿ ಸಹಿತ ವಿವಿಧ ಮೂಲದಿಂದ ನಾನು 1.5 ಕೋಟಿ ರೂ. ಒದಗಿಸುವುದಾಗಿ ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ತುಳು ಸಾಹಿತ್ಯ ಅಕಾಡೆಮಿ ಆವರಣದಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ಪ್ರಾಧಿಕಾರದಿಂದ 25 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮಾತನಾಡಿ, ಪ್ರಾಧಿಕಾರದ 25 ಲಕ್ಷ ರೂ. ಹಾಗೂ ಶಾಸಕರ ಅನುದಾನ 6 ಲಕ್ಷ ರೂ.ವೆಚ್ಚದಲ್ಲಿ ಬಯಲು ರಂಗಮಂದಿರ ನಿರ್ಮಾಣಗೊಂಡಿದೆ. ತುಳುಭವನದ ಸಿರಿಚಾವಡಿ ಹಾಗೂ ಬಯಲು ರಂಗಮಂದಿರವನ್ನು ತುಳು ಸಂಬಂಧಿತ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಲಾಗುವುದು. ತುಳು ಭವನ ನಿರ್ಮಾಣಕ್ಕೆ ಬಿಜೆಪಿ ಸರಕಾರ ಅನುದಾನ ನೀಡಿದೆ. ಶೀಘ್ರದಲ್ಲಿ ತುಳು ಅಧಿಕೃತ ರಾಜ್ಯಭಾಷೆಯಾಗುವ ವಿಶ್ವಾಸವಿದೆ ಎಂದರು.

ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೋರೇಟರ್ ಗಣೇಶ್ ಕುಲಾಲ್, ಕರಾವಳಿ ಅಭಿವೃದ್ಧಿ ಪ್ರಾಕಾರ ಕಾರ್ಯದರ್ಶಿ ಪ್ರದೀಪ್ ಡಿಸೋಜ, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕವಿತಾ ಅತಿಥಿಗಳಾಗಿದ್ದರು.ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರಕಟಿತ ‘ಸೀಕ್ ಸಂಕಡ ಇಲ್ಲ ಪಾತೆರ ಬೈದೆರೆನ ಕೆಬಿ ಪಾತೆರ’ ಮತ್ತು ಮದೆಪ್ಪೆರಾವಂದಿ ತುಳುವೆರ್ ಮಾಲಿಕೆಯ ಪುಸ್ತಕ ‘ಆಟದಾರ್ ಪುಳಿಂಚದಾರ್ ರಾಮಯ್ಯ ಶೆಟ್ರ್’ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.

ಸಾಹಿತಿ ಡಾ. ಸದಾನಂದ ಪೆರ್ಲ ಅವರನ್ನು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಎಂ.ಸಿ.ಎಫ್ ಪ್ರಾಯೋಜಕತ್ವದ ದಾಖಲೀಕರಣ ಯೋಜನೆಯನ್ನು ಅನುಷ್ಠಾನಗೊಳಿಸಿದ ವಿವಿಧ ಮಾಧ್ಯಮಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಮಟ್ಟಾರು ರತ್ನಾಕರ ಹೆಗ್ಡೆ, ದಯಾನಂದ ಕತ್ತಲ್‌ಸಾರ್ ಅವರನ್ನು ಗೌರವಿಸಲಾಯಿತು.ಅಕಾಡೆಮಿ ಸದಸ್ಯರಾದ ನಾಗೇಶ್ ಕುಲಾಲ್, ಕಲಾವತಿ ದಯಾನಂದ್, ಲೀಲಾಕ್ಷ ಕರ್ಕೇರ, ನರೇಂದ್ರ ಕೆರೆಕಾಡು, ಚೇತಕ್‌ಪೂಜಾರಿ, ಆಕಾಶ್‌ರಾಜ್ ಜೈನ್, ಪಿ.ಎಂ. ರವಿ, ಸಂತೋಷ್ ಪೂಜಾರಿ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯೆ ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News