ಮಂಡ್ಯ | ಮುಂದುವರಿದ ಮಳೆ ಅವಾಂತರ: ರಸ್ತೆ, ಜಮೀನು, ಗ್ರಾಮಗಳು ಜಲಾವೃತ

Update: 2022-10-15 14:13 GMT

ಮಂಡ್ಯ, ಅ.15: ಎರಡು ತಿಂಗಳ ನಂತರ ಮತ್ತೆ ಜಿಲ್ಲೆ ವರುಣನ ಆರ್ಭಟಕ್ಕೆ ನಲುಗಿದೆ. ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕರೆಕಟ್ಟೆಗಳು ಕೋಡಿಬಿದ್ದು, ಹಳ್ಳಕೊಳ್ಳಗಳಲ್ಲಿ ಪ್ರವಾಹ ಉಂಟಾಗಿದೆ. ಸಾವಿರಾರು ಎಕರೆ ಬೆಳೆ ನಾಶವಾಗಿದೆ. ರಸ್ತೆಗಳು, ಗ್ರಾಮ, ಕಾಲನಿಗಳು ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಂಡ್ಯದ ಕೆರೆಯಂಗಳ ವಿವೇಕಾನಂದ ಬಡಾವಣೆ ಮತ್ತು ಬೀಡಿ ಕಾರ್ಮಿಕರ ಕಾಲನಿಯ ಜನ ಮತ್ತೆ ಜಲದಿಗ್ಬಂಧನಕ್ಕೆ ಸಿಲುಕಿದ್ದಾರೆ. ಬಡಾವಣೆಗಳು ಅಕ್ಷರಶಃ ಜಲಾವೃತಗೊಂಡಿದೆ.  ದಿಕ್ಕುತೋಚದ ಹಲವು ನಿವಾಸಿಗಳು ಮನೆಮೇಲೆ ಏರಿ ಕುಳಿತು ರಾತ್ರಿ ಕಳೆದಿದ್ದಾರೆ. ದವಸಧಾನ್ಯ, ಬಟ್ಟೆಬರೆ ತೊಯ್ದುಹೋಗಿವೆ. ನೀರಿನಲ್ಲಿ ಸಿಲುಕಿದ ಜನರನ್ನು ಕರೆತರಲು ಸ್ಥಳೀಯರು ತೆಪ್ಪಗಳ ಸಹಾಯ ಪಡೆದರು. ಹಾಲಹಳ್ಳಿ ಸ್ಲಂ ಸೇರಿದಂತೆ ನಗರದ ಬಡಾವಣೆಗಳೂ ಜಲಾವೃತವಾಗಿದ್ದು, ಜನರು ಪರದಾಡುತ್ತಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಕೆರೆಗಳು ಒಡೆದಿದ್ದರೆ, ಹಲವು ಕೆರೆಕಟ್ಟೆಗಳು ಕೋಡಿಬಿದ್ದು ಹಳ್ಳಕೊಳ್ಳಗಳಲ್ಲಿ ಪ್ರವಾಹ ಉಂಟಾಗಿದೆ. ಪರಿಣಾಮ ಇತ್ತೀಚೆಗೆ ಬಿತ್ತನೆಯಾಗಿದ್ದ ಸಾವಿರಾರು ಎಕರೆ ಪ್ರದೇಶದ ಭತ್ತದ ಬೆಳೆ ಕೊಚ್ಚಿ ಹೋಗಿದೆ. ರಾಗಿ, ಕಬ್ಬು ಇತರೆ ಬೆಳೆಗಳಿಗೂ ಹಾನಿಯಾಗಿದೆ. 

ಇನ್ನು ರಸ್ತೆಗಳಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ಪ್ರಗತಿಯಲ್ಲಿರುವ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಚಾರಕ್ಕೆ ತೀವ್ರ ತಡೆಯಾಗಿದೆ. ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಹಲವು ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ಕೆಲವು ಕಡೆ ಸೇತುವೆಗಳು ಒಡೆದು ಪಕ್ಕದ ಗ್ರಾಮಗಳು ಜಲಾವೃತಗೊಂಡಿವೆ.

ಹೊಳಲು ಗ್ರಾಮದ ಎಚ್.ಡಿ.ಚೌಡಯ್ಯ ಬಡಾವಣೆಯೂ ಸಂಪೂರ್ಣ ಜಲಾವೃತಗೊಂಡಿದ್ದು, ಜನರು ಪರದಾಡುತ್ತಿದ್ದಾರೆ. ಬೆಂಗಳೂರು ಮೈಸೂರು ಬೈಪಾಸ್ ರಸ್ತೆಗೆ ಹೊಳಲು ಗ್ರಾಮದ ಬಳಿ ನಿರ್ಮಿಸಿರುವ ಮೇಲ್ಸೇತುವೆ ನೀರು ಪಕ್ಕದ ಜಮೀನಿಗೆ ಹರಿದು ನೂರಾರು ಎಕರೆ ಬೆಳೆ ಹಾನಿಯಾಗಿದೆ. ಮುದಗಂದೂರು ಗ್ರಾಮದಲ್ಲಿ ಸುಮಾರು 200 ಎಕರೆ ಬೆಳೆ ಜಲಾವೃತವಾಗಿದೆ. 

ಮತ್ತೆ ಒಡೆದ ಬೂದನೂರು ಕೆರೆ: ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಹೊಸಬೂದನೂರು ಕೆರೆ ಏರಿ ಮತ್ತೆ ಒಡೆದಿದ್ದು, ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. ಎರಡು ತಿಂಗಳ ಹಿಂದೆಯೂ ಕೆರೆ ಏರಿ ಒಡೆದು ಸುಮಾರು ಮೂರ್ನಾಲ್ಕು ದಿನ ಸಂಚಾರ ಬಂದ್ ಆಗಿತ್ತು.

ಬೆಂಗಳೂರು-ಮೈಸೂರು ಮಾರ್ಗದ ವಾಹನಗಳನ್ನು ಮಂಡ್ಯ ಮತ್ತು ಮದ್ದೂರಿನಿಂದ ಬದಲೀ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಕೆ.ಎಂ.ದೊಡ್ಡಿ, ಬೆಸಗರಹಳ್ಳಿ ಮಾರ್ಗವಾಗ ಸಂಚರಿಸಿ ಮದ್ದೂರು ಮಂಡ್ಯ ಬಳಿ ಹೆದ್ದಾರಿ ಸಂಪರ್ಕಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News