ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೆಸೆಯಲು ‘ಜನ ಸಂಕಲ್ಪ’ ಮಾಡಿದ್ದಾರೆ: ಸಿದ್ದರಾಮಯ್ಯ

Update: 2022-10-15 15:12 GMT

ಬಳ್ಳಾರಿ, ಅ.15: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ಆರಂಭಿಸಿದ ಬಳಿಕ ಬಿಜೆಪಿಯವರು ಜನಸಂಕಲ್ಪ ಯಾತ್ರೆಯನ್ನು ಮಾಡುತ್ತಿದ್ದಾರೆ. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲು ‘ಜನ ಸಂಕಲ್ಪ’ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶನಿವಾರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಭಾರತ ಜೋಡೊ ಯಾತ್ರೆಯ ಅಂಗವಾಗಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪಾದಯಾತ್ರೆಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲ ಕಂಡು ಬಿಜೆಪಿಯವರಿಗೆ ನಡುಕ ಹುಟ್ಟಿದೆ. ಅಧಿಕಾರ ಹೋಗುತ್ತದೆ ಎಂಬ ಹೆದರಿಕೆ ಶುರುವಾಗಿದೆ ಎಂದರು.

2018ರಲ್ಲಿ ಬಿಜೆಪಿಯವರು ಪ್ರಣಾಳಿಕೆಯಲ್ಲಿ ನೀಡಿದ ಶೇ.10ರಷ್ಟು ಭರವಸೆಗಳನ್ನು ಈಡೇರಿಸಿಲ್ಲ. ಕೇವಲ ಲೂಟಿ ಮಾಡಿ ರಾಜ್ಯ ಹಾಳು ಮಾಡುತ್ತಿದ್ದಾರೆ. ರಾಜ್ಯದಲ್ಲಿ 40 ಪರ್ಸೆಂಟ್ ಸರಕಾರವಿದೆ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದರೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಅವರು ಕಿಡಿಗಾರಿದರು.

ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ಪಕ್ಷ ಹಾಗೂ ನೆಹರು ಕುಟುಂಬ ದೇಶಕ್ಕೆ ಏನೂ ಮಾಡಿಲ್ಲ ಎಂದು ಹೇಳಿದ್ದಾರೆ. 1977ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆ ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟು ಊಟ ಕೊಟ್ಟಿದ್ದು ಇಂದಿರಾ ಗಾಂಧಿ. ಸೋನಿಯಾ ಗಾಂಧಿ 1999ರಲ್ಲಿ ಬಳ್ಳಾರಿಯಿಂದ ಗೆದ್ದು ಸಂಸದರಾಗಿ ವಿದ್ಯುತ್ ಯೋಜನೆಗೆ 3300 ಕೋಟಿ ರೂ.ತಂದರು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ರಾಮುಲು ಬಳ್ಳಾರಿಗೆ ನಿನ್ನ ಹಾಗೂ ಬಿಜೆಪಿ ಕೊಡುಗೆ ಏನು? ಮೋದಿ ಪ್ರಧಾನಿ ಆಗಿ 8 ವರ್ಷ ಆಗಿದೆ, ಬಳ್ಳಾರಿ ಜಿಲ್ಲೆಗೆ 1 ರೂ. ಕೆಲಸ ಆಗಿದೆಯಾ? ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಕೊಟ್ಟವರು ಯಾರು? ನಾವು ಪಾದಯಾತ್ರೆ ಮಾಡಿದ ನಂತರ ಜನಾರ್ದನ ರೆಡ್ಡಿ ಜೈಲಿಗೆ ಹೋಗಬೇಕಾಯಿತು ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಪಾದಯಾತ್ರೆಯು ಕರ್ನಾಟಕ ನಂತರ ಆಂಧ್ರ, ತೆಲಂಗಾಣ ಹೀಗೆ 12 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಗಲಿದೆ. ದೇಶದಲ್ಲಿ ಜಾತಿ, ಧರ್ಮ, ವರ್ಗ, ಭಾಷೆ ಆಧಾರದ ಮೇಲೆ ಜನರನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಮನಸ್ಸಲ್ಲಿ ವಿಷ ಹಿಂಡುತ್ತಿದ್ದಾರೆ. ಮೋದಿ ಪ್ರಧಾನಿಯಾದ ನಂತರ ಮಾನವ ವಿರೋಧಿ ಕೆಲಸ ಹೆಚ್ಚಾಗುತ್ತಿದೆ ಎಂದು ಅವರು ಕಿಡಿಗಾರಿದರು.

ರಾಹುಲ್ ಗಾಂಧಿ ಪಾದಯಾತ್ರೆಯನ್ನು ಬಿಜೆಪಿಯವರು ಲಘುವಾಗಿ ಟೀಕಿಸುತ್ತಿದ್ದಾರೆ. ರಾಹುಲ್ ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ. ಮೋದಿ, ಅಮಿತ್ ಶಾ ದೇಶಕ್ಕೆ ನಿಮ್ಮ ತ್ಯಾಗ ಏನು? ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದ ಮೋದಿ, 16 ಕೋಟಿ ಉದ್ಯೋಗ ನೀಡುವ ಬದಲು ಇರುವ ಉದ್ಯೋಗಗಳನ್ನು ಕಸಿದಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದವರು ಅವರ ವೆಚ್ಚ ದುಪ್ಪಟ್ಟು ಮಾಡಿದ್ದಾರೆ ಎಂದು ಅವರು ಆರೋಪಿಸಿದರು. 

‘ಭಾರತ ಜೋಡೋ ಯಾತ್ರೆ ರಾಜ್ಯದಲ್ಲಿ 429 ಕಿ.ಮೀ ಪೂರ್ಣಗೊಳಿಸಿದೆ. 2014ರಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಘೋಷಿಸಿದ್ದ ವಿಶ್ವಗುರು, ಈ ಯಾತ್ರೆಯಲ್ಲಿ ನಿತ್ಯ ಲಕ್ಷಾಂತರ ಮಂದಿಯ ಉತ್ಸಾಹ ನೋಡಿ ತಲೆ ಕೆಡಿಸಿಕೊಂಡಿದ್ದಾರೆ. ದೇಶವನ್ನು ದ್ವೇಷ, ಹಿಂಸೆ, ನಿರುದ್ಯೋಗ ಹಾಗೂ ಬಡತನ ಮುಕ್ತ, ಪ್ರಜಾಪ್ರಭುತ್ವ ರಕ್ಷಿಸುವ ಉದ್ದೇಶದಿಂದ ಈ ಯಾತ್ರೆ ಆರಂಭವಾಗಿದೆ'

-ಬಿ.ಕೆ.ಹರಿಪ್ರಸಾದ್,ಪರಿಷತ್ ವಿಪಕ್ಷ ನಾಯಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News