ಮುಚ್ಚಳಿಕೆ ಬರೆದುಕೊಡುವುದಿಲ್ಲ, ಅ.18ರ ಹೋರಾಟ ನಿಲ್ಲುವುದಿಲ್ಲ: ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿ

Update: 2022-10-16 08:25 GMT

ಸುರತ್ಕಲ್, ಅ.16: ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿ ಯಾವುದೇ ಕಾರಣಕ್ಕೂ ಮುಚ್ಚಳಿಕೆ ಬರೆದುಕೊಡುವುದಿಲ್ಲ. ವಾರಂಟ್ ಹೊರಡಿಸಿ ಬಂಧಿಸುವುದಾದರೆ ತುಳುನಾಡಿನ ಜನ ಸಾಮಾನ್ಯರ ಪರವಾಗಿ ಜೈಲಿಗೆ ಹೋಗಲು ಸಿದ್ದರಾಗುವುದು. ಅ.18ರ ಅಕ್ರಮ ಟೋಲ್ ಸ್ಥಗಿತ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ನಾವು ಜೈಲು ಸೇರಿದರೂ ಅಂದು ಹೋರಾಟ ನಡೆಯುತ್ತದೆ ಎಂದು ಟೋಲ್ ಗೇಟ್ ಹೋರಾಟ ಸಮಿತಿ ಹೇಳಿದೆ.

ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿಯ ಮುಖಂಡರಿಗೆ ಶನಿವಾರ ರಾತ್ರಿ ಏಕಾಏಕಿ ಪೊಲೀಸ್ ಸಮನ್ಸ್ ನೋಟಿಸ್ ಜಾರಿಗೊಳಿಸಿರುವ ಬಗ್ಗೆ ಹೋರಾಟ ಸಮಿತಿ ಸದಸ್ಯರು ಜನಪರ ವಕೀಲರ‌ ತಂಡದೊಂದಿಗೆ ತುರ್ತು ಸಭೆ‌ ನಡೆಸಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ‌.
ಪ್ರತಿಭಟನೆಯ ಭಾಗವಾಗಿ ಹೋರಾಟ ‌ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಜೈಲು ಸೇರಿದರೆ, ಆ ಸ್ಥಾನ ತುಂಬಲು ಹಲವು ಮುಖಂಡರಿದ್ದಾರೆ‌. ನೂರಾರು ಸಂಘಟನೆ, ಮುಖಂಡರ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿರುವ ಈ ಮಹತ್ವದ ಹೋರಾಟಕ್ಕೆ ನಾಯಕರುಗಳ ಕೊರತೆ ಇಲ್ಲ. ಮುತ್ತಿಗೆ ಪ್ರತಿಭಟನೆ ನಿಗದಿಯಂತೆ ಅ.18ರಂದು ಶಾಂತಿಯುತವಾಗಿ ನಡೆಯಲಿದೆ. ಯಾರೂ ಪ್ರಚೋದನೆಗೆ ಒಳಗಾಗಬಾರದು ಎಂದು ಸಮಿತಿ ವಿನಂತಿ ಮಾಡಿದೆ.
ತುಳುನಾಡಿನ ಸಮಸ್ತ ಜನತೆ ಹೋರಾಟ ಸಮಿತಿಯ ಮೇಲೆ ಬಿಜೆಪಿ ಸರಕಾರ ನಡೆಸುತ್ತಿರುವ ದಾಳಿಯ ಸಂದರ್ಭ  ಹೋರಾಟದ ಜೊತೆ ನಿಲ್ಲಬೇಕು. ಧ್ವನಿಯನ್ನು ಮತ್ತಷ್ಟು ಎತ್ತರಿಸಬೇಕು. ಯಾವುದೇ ಕಾರಣಕ್ಕೂ ಗುಲಾಮಗಿರಿಯ ಸಂಕೇತವಾಗಿರುವ ಟೋಲ್ ಗೇಟ್ ಸುಲಿಗೆ ಮುಂದುವರಿಯಬಾರದು. ಮುಂದುವರಿಯಲು ಅವಕಾಶಕೊಡುವುದಿಲ್ಲ ಎಂದು ಒಕ್ಕೊರಲಿನಿಂದ ಗಟ್ಟಿಯಾಗಿ ಬಿಜೆಪಿ ಶಾಸಕ, ಸಂಸದ ಶಾಸಕರಿಗೆ ಹೇಳುವಂತಾಗಬೇಕು ಎಂದು ಹೋರಾಟ‌ ಸಮಿತಿ ನಾಗರಿಕರಲ್ಲಿ ಮನವಿ‌ ಮಾಡಿದೆ.
 



ಯಾವುದೇ ಕಾರಣಕ್ಕೂ ಹೋರಾಟ ಸೋಲುವುದಿಲ್ಲ. ಅ.18 ರಂದು ಟೋಲ್ ಸಂಗ್ರಹ ಅಂತ್ಯಗೊಳ್ಳಲೇಬೇಕು. ನಮ್ಮ ಮೇಲೆ ಪೊಲೀಸ್ ದೌರ್ಜನ್ಯ ಹರಿಯಬಿಟ್ಟು ಬಿಜೆಪಿ ಶಾಸಕರು ಬೀಗುವುದು ಬೇಡ. ಜನ ಆಕ್ರೋಶಗೊಂಡಿದ್ದಾರೆ. ಅವರು ನಿಮಗೆ ಸರಿಯಾಗಿ ಉತ್ತರಿಸುತ್ತಾರೆ.
-ಮುನೀರ್ ಕಾಟಿಪಳ್ಳ
ಸಂಚಾಲಕರು, ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ

 



ಹೋರಾಟಕ್ಕೆ ಸಂಬಂಧಪಡದ ಕೆಲವು ಅಮಾಯಕರಿಗೂ ನೋಟಿಸ್:
ಸಭೆಯಲ್ಲಿ ಪೊಲೀಸರು ನೋಟಿಸ್ ನೀಡಿದ ಸಂದರ್ಭವನ್ನು ವಿವರಿಸಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ನನ್ನ ಮನೆಗೆ ನಿನ್ನೆ ತಡರಾತ್ರಿ ಬಂದ ಪೊಲೀಸರ ತಂಡ ಸಮನ್ಸ್ ನೀಡಿದೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಿಂದ ಕಳುಹಿಸಿದ ಸಮನ್ಸ್ ನೋಟೀಸ್ ನಲ್ಲಿ ನಮ್ಮನ್ನು ಏಕವಚನದಲ್ಲಿ ಕ್ರಿಮಿನಲ್ ರೀತಿ ಪದಗಳನ್ನು ಬಳಸಿ ಸಂಬೋಧಿಸಲಾಗಿದೆ. ಬಿಜೆಪಿ ಪೊಲೀಸರ ನೀತಿಯೇ ಹಾಗಿರಬಹುದು. ಹೆಚ್ಚು ಕಮ್ಮಿ ಐವತ್ತಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಲಾಗಿದೆ. ಹೋರಾಟಕ್ಕೆ ಸಂಬಂಧ ಪಡದ ಕೆಲವು ಅಮಾಯಕರಿಗೂ ನೋಟಿಸ್ ಬಂದಿದೆ. ಕ್ರಿಮಿನಲ್ ಗಳ ರೀತಿ ಮನೆಗಳನ್ನು ಪೊಲೀಸರು ಸುತ್ತುವರಿದಿದ್ದರು ಎಂದು ಪೊಲೀಸರ ನಡೆಯ ಕುರಿತು ಅಸಮಾಧಾನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ಮನೆಗಳಿಗೆ ತಡರಾತ್ರಿ ಭೇಟಿ ನೀಡಿದ ಪೊಲೀಸರು: ಹಲವು ಮುಖಂಡರಿಗೆ ನೋಟಿಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News