'ಪಾದಯಾತ್ರೆ ನಡೆಸಿದರೆ ಸಾಲದು': 'ಭಾರತ್ ಜೋಡೊ' ಸಮಾವೇಶದ ಕಸ ಗುಡಿಸಿ ಸ್ವಚ್ಛಗೊಳಿಸಿದ ಸಚಿವ ಶ್ರೀರಾಮುಲು

Update: 2022-10-16 18:56 GMT

ಬೆಂಗಳೂರು, ಅ. 16: ‘ನಾವು ಮಾತ್ರ ಸ್ವಚ್ಛವಾಗಿದ್ದರೆ ಸಾಲದು. ಸುತ್ತಮುತ್ತಲಿನ ಪರಿಸರವೂ ಅಷ್ಟೇ ಶುಭ್ರವಾಗಿರಬೇಕು ಎಂಬ ಕಾರಣಕ್ಕಾಗಿ ದೇಶದ ಪ್ರಧಾನಿ ಮೋದಿ‘ಸ್ವಚ್ಛ ಭಾರತ್ ಯೋಜನೆ' ಪ್ರಾರಂಭಿಸಿದ್ದರು. ಕಡೆ ಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸ್ಥಳೀಯ ನಾಯಕರಿಗಾದರೂ ಇದರ ಬಗ್ಗೆ ಅರಿವು ಮೂಡಿಸದಿರುವುದು ನನಗೆ ಆಶ್ಚರ್ಯ ಉಂಟು ಮಾಡಿದೆ' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು (B. Sriramulu)  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ದೇಶ ಜೋಡಿಸುತ್ತೇನೆ ಎಂದು ಕೇವಲ ಪಾದಯಾತ್ರೆ ನಡೆಸಿದರೆ ಸಾಲದು. ರಾಹುಲ್ ಗಾಂಧಿ ಅವರೇ. ಭಾರತವನ್ನು ನೀವು ಬೇಸೆಯುವ ಯತ್ನ ಮಾಡಿ. ನಮ್ಮದೇನು ಅಭ್ಯಂತರ ಇಲ್ಲ. ಆದರೆ, ನೀವೇ ನಿಂತು ಅಬ್ಬರಿಸಿ ಬೊಬ್ಬಿರಿಸಿದ ಸ್ಥಳವನ್ನು ಸ್ವಚ್ಛಗೊಳಿಸುವಂತೆ ನಿಮ್ಮ ಕಾರ್ಯಕರ್ತರಿಗೆ ಕಿವಿಮಾತು ಹೇಳದಿದ್ದರೆ, ನಿಮ್ಮ ಪಾದಯಾತ್ರೆಯ ಸದುದ್ದೇಶ ಈಡೇರುತ್ತದೆಯೇ?' ಎಂದು ಸಲಹೆ ನೀಡಿದ್ದಾರೆ.

‘ಶನಿವಾರ ಬಳ್ಳಾರಿಯ ಮುನಿಸಿಪಲ್ ಮೈದಾನದಲ್ಲಿ ‘ಭಾರತ್ ಜೋಡೊ ಯಾತ್ರೆ' ಸಮಾವೇಶದಲ್ಲಿ ದೊಡ್ಡ ದೊಡ್ಡ ಭಾಷಣ ಬಿಗಿದು ವೀರಾವೇಶದ ಮಾತುಗಳನ್ನಾಡಿದ್ದ ಕಾಂಗ್ರೆಸ್ ನಾಯಕರಿಗೆ ಕನಿಷ್ಟ ಪಕ್ಷ ತಾವು ಮಾಡಿದ್ದ ಹೊಲಸನ್ನು ಸ್ವಚ್ಛಗೊಳಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಇದ್ದಂತೆ ಕಾಣಲಿಲ್ಲ. ಸ್ವತಃ ನಾನು ಹಾಗೂ ನಮ್ಮ ಪಕ್ಷದ ಮುಖಂಡರು ಸ್ವಚ್ಛಗೊಳಿಸುವ ಮೂಲಕ ಕೈ ಕೊಳಕನ್ನು ತೆಗೆದುಹಾಕಿದೆವು' ಎಂದು ರಾಮುಲು ವಾಗ್ದಾಳಿ ನಡೆಸಿದ್ದಾರೆ.

ಜಗ್ಗುವುದಿಲ್ಲ: ‘ನನ್ನ ಬಗ್ಗೆ ವೇದಿಕೆಯಲ್ಲಿ ವೀರಾವೇಶದ ಭಾಷಣ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬಿದ್ದು, 2023ರ ವಿಧಾನಸಭೆ ಚುನವಣೆಯನ್ನು ಮೂಲೆಗುಂಪಾಗಿ ಕಾಂಗ್ರೆಸ್ ಪಕ್ಷಕ್ಕೆ ಕೊನೆಯ ಮೊಳೆ ಹೊಡೆಯುವುದು ಶತಸಿದ್ದ ಎಂದು ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

‘ನೂರು ಸಿದ್ದರಾಮಯ್ಯನವರಂತವರು ಬಂದರೂ ಎದುರಿಸುವ ಶಕ್ತಿ ನನಗೆ ಜನತೆ ಕೊಟ್ಟಿದ್ದಾರೆ. ಜಾತಿ-ಧರ್ಮಗಳ ನಡುವೆ ಬೆಂಕಿ ಹಚ್ಚಿದ ಇಂತಹವರಿಗೆ ಜಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ. ದಲಿತ ವಿರೋಧಿಗಳು ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಸರಕಾರ ಹಾಗೂ ನಮ್ಮ ಬಗ್ಗೆ ಆಧಾರ ರಹಿತವಾಗಿ ಮಾಡಿದ್ದ ಎಲ್ಲ ಆರೋಪಗಳಿಗೂ ದಾಖಲೆ ಸಮೇತ ಪ್ರತ್ಯುತ್ತರ ನೀಡುತ್ತೇನೆ' ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News