ಶಿವಮೊಗ್ಗ | ಮನೆ ತೆರವಿಗೆ ವಿರೋಧ: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

Update: 2022-10-17 12:56 GMT

ಶಿವಮೊಗ್ಗ, ಅ.17: ನಗರದ ಮಲ್ಲಿಗೇನಹಳ್ಳಿ ಸಮೀಪದ ತುಂಗಾ ಮೇಲ್ದಂಡೆ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿ, ನೀರಾವರಿ ಇಲಾಖೆಯವರು ಪೊಲೀಸರ ನೆರವಿನೊಂದಿಗೆ  ಕೆಲವೊಂದು ಮನೆಗಳನ್ನು ತೆರವುಗೊಳಿಸಿದರು.

ಈ ವೇಳೆ ಪ್ರತಿಭಟನಾನಿರತರಿಬ್ಬರು ತೆರವು ಕಾರ್ಯಾಚರಣೆ ವಿರೋಧಿಸಿ,  ಮೈಮೇಲೆ  ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. 

ಮಲ್ಲಿಗೇನಹಳ್ಳಿ ಸಮೀಪದ ಅಂಬೇಡ್ಕರ್ ಕಾಲೋನಿಯಲ್ಲಿ ನೀರಾವರಿ ಇಲಾಖೆಯ ತುಂಗಾ ಮೇಲ್ದಂಡೆ ಯೋಜನೆಯ ಬಫರ್ ಝೋನ್ ನಲ್ಲಿ ಸುಮಾರು  5 ಎಕರೆ 3 ಗುಂಟೆ ಜಾಗ ಒತ್ತುವರಿ ಆಗಿದ್ದು ,ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಸೋಮವಾರ ಮನೆ ತೆರವು ಕಾರ್ಯಾಚರಣೆ ನಡೆಸಿದರು.

ನೀರಾವರಿ ಇಲಾಖೆಗೆ ಸೇರಿದ 5 ಎಕರೆ 3 ಗುಂಟೆ ಜಾಗದಲ್ಲಿ ಸುಮಾರು 200 ಮನೆಗಳನ್ನು ಹಕ್ಕಿಪಿಕ್ಕಿ ಜನಾಂಗದವರು ನಿರ್ಮಿಸಿಕೊಂಡಿದ್ದರೆನ್ನಲಾಗಿದ್ದು,  ಈ ಹಿಂದೆ ಜಾಗ ತೆರವುಗೊಳಿಸುವಂತೆ ನೀರಾವರಿ ಇಲಾಖೆ ನೋಟೀಸ್ ನೀಡಿದ್ದರೂ ಯಾವುದೇ ಉತ್ತರ ನೀಡಿಲ್ಲದ್ದ ಕಾರಣ ಅಧಿಕಾರಿಗಳು ಪೊಲೀಸ್ ಇಲಾಖೆ ನೆರವಿನೊಂದಿಗೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

► ಮಾತಿನ ಚಕಮಕಿ: ಮನೆ ತೆರವು ಕಾರ್ಯಾಚರಣೆ ವಿರೋಧಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು  ಸ್ಥಳದಲ್ಲಿ ಧರಣಿ ನಡೆಸಿದರು. ಈಗಾಗಲೇ ಈ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಕಳೆದ 7 -8 ವರ್ಷಗಳಿಂದ ವಿದ್ಯುತ್ ನೀಡಲಾಗಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರ ಚೀಟಿ ನೀಡಿದ್ದು, ಇಲ್ಲಿ ಸರ್ಕಾರದ ಅಂಗನವಾಡಿ ಕೂಡ ಇದೆ ಎಂದು ಸ್ಥಳೀಯರು ಹೇಳಿದರು. ಆದರೂ, ನಿರಾವರಿ ಇಲಾಖೆ ಸುಮಾರು ಪೊಲೀಸರ ನೆರವಿನೊಂದಿಗೆ ತೆರವಿಗೆ ಮುಂದಾದಾಗ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾನಿರತರ ಜೊತೆ ಮಾತನಾಡಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುರೇಶ್, ನೀವು ತಡೆ ನೀಡಲು ಕೋರ್ಟ್‌ನಿಂದ ತಡೆಯಾಜ್ಞೆ ತಂದಿಲ್ಲ ಹಾಗಾಗಿ ತೆರವುಗೊಳಿಸುತ್ತಿದ್ದೇವೆ. ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಮನವಿ ಮಾಡಿದರು.

► 20 ನಿಮಿಷ ಕಾಲಾವಕಾಶ ಕೊಟ್ಟ ಅಧಿಕಾರಿಗಳು:

ಮನೆ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸದಂತೆ ನೀರಾವರಿ ಇಲಾಖೆ ಅಧಿಕಾರಿಗಳು ಪ್ರತಿಭಟನಾನಿರತ ಸ್ಥಳೀಯ ನಿವಾಸಿಗಳಿಗೆ 20 ನಿಮಿಷ ಕಾಲಾವಕಾಶ ನೀಡಿದರು. ಆದರೆ ಸ್ಥಳೀಯ ಜೆಸಿಬಿ ಯಂತ್ರಗಳ ಮುಂದೆ ಮಲಗಿ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ಅಧಿಕಾರಿಗಳು ಯಾವುದಕ್ಕೂ ಬಗ್ಗದೆ ಮನೆ ತೆರವು ಕಾರ್ಯಾಚರಣೆ ನಡೆಸಿದರು. ಈ ವೇಳೆ ಪ್ರತಿಭಟನಾನಿರತ ಮುಖಂಡರಿಬ್ಬರು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಪೊಲೀಸ್ ಸಿಬ್ಬಂದಿಗಳು ಆ ಇಬ್ಬರನ್ನು ವಶಕ್ಕೆ ಪಡೆದುಕೊಂಡರು.

ಖಾಲಿ ಇರುವ 4 ಮನೆಗಳನ್ನು  ನೆಲಸಮಗೊಳಿಸಿದ್ದು, ವಾಸವಿರುವವರಿಗೆ 15 ದಿನದ ಗಡುವು ನೀಡಿ ಕಾರ್ಯಾಚರಣೆ ಮುಂದೂಡಲಾಗಿದೆ.ಪ್ರ ತಿಭಟನೆ ಕೈಗೊಂಡು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದವರನ್ನು ಪೊಲೀಸರು ವಾಹನದಲ್ಲಿ ಕರೆದೊಯ್ದರು.

ಮಾಜಿ ಶಾಸಕ ಪ್ರಸನ್ನ ಕುಮಾರ್ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಭೇಟಿ ನೀಡಿ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ''ಸುಮಾರು ವರ್ಷಗಳಿಂದ 199 ಮನೆಗಳಲ್ಲಿ ಜನ ಇಲ್ಲಿ ವಾಸವಾಗಿದ್ದಾರೆ. ಏಕಾಏಕಿ ತುಂಗಾ ಮೇಲ್ಡಂಡೆ ಇಲಾಖೆ ಅಧಿಕಾರಿ ತೆರವುಗೊಳಿಸಲು ಮುಂದಾಗಿದ್ದಾರೆ. ಶಿವಮೊಗ್ಗ ನಗರ ಶಾಸಕರು ನಾನು ಮಂತ್ರಿಯಾಗಿಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇವರ ಶಾಪ ತಟ್ಟಿ ಶಾಶ್ವತವಾಗಿಯೇ ಅವರು ಮಂತ್ರಿಯಾಗುವುದಿಲ್ಲ. ಆದ್ದರಿಂದ ಕೂಡಲೇ ಸ್ಥಳಕ್ಕೆ ಆಗಮಿಸಿ ಇಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು'' ಎಂದು ಆಗ್ರಹಿಸಿದರು.

ಕಾರ್ಯಾಚರಣೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್,ಡಿವೈಎಸ್ಪಿ ಪ್ರಭು,ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್,ಭರತ್,ಮಂಜುನಾಥ್,ಅಭಯಪ್ರಕಾಶ್ ಸೋಮನಾಳ್ ಸೇರಿದಂತೆ ಹಲವರಿದ್ದರು.

''ಕಷ್ಟಪಟ್ಟು ಹಣ ಹೊಂದಿಸಿ ನಿರ್ಮಿಸಿದ ಮನೆಯನ್ನು ಏಕಾಏಕಿ ಕೆಡವಲು ಬಂದಿದ್ದಾರೆ. ನಮ್ಮ ಮನೆಯ ಒಂದು ಇಟ್ಟಿಗೆ ಬಿದ್ದರೂ ನಾವು ಸಾಯಲು ಸಿದ್ಧರಿದ್ದೇವೆ. ಇಲ್ಲವಾದಲ್ಲಿ ನಮಗೆ ಲೈಸನ್ಸ್ಡ್ ಗನ್ ಕೊಡಲಿ. ನಾವು ಮರಳಿ ಕಾಡಿಗೆ ಹೋಗುತ್ತೇವೆ. ತೆರವು ಕಾರ್ಯಾಚರಣೆ ಕೈಗೊಂಡರೆ ರಾಜ್ಯಾದ್ಯಂತ ಹಕ್ಕಿಪಿಕ್ಕಿ ಸಮಾಜ ಪ್ರತಿಭಟನೆ ಮಾಡುತ್ತದೆ''.

-ಜಗ್ಗು,ರಾಜ್ಯಾಧ್ಯಕ್ಷ,ಕರ್ನಾಟಕಅಲೆಮಾರಿ ಬುಡಕಟ್ಟು ಹಕ್ಕಿಪಿಕ್ಕಿ ಸಂರಕ್ಷಣಾ ಸಮಿತಿ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News