ತುಮಕೂರು | ಬಾಳೆಗೊನೆ ಕಳವು ಆರೋಪ; ತೋಟದ ಮಾಲಕರಿಂದ ಹಲ್ಲೆಗೊಳಗಾದ ದಲಿತ ಯುವಕ ಮೃತ್ಯು
ತುಮಕೂರು.ಅ.17: ಬಾಳೆಗೊನೆ ಕಳವುಗೈದಿದ್ದಾನೆ ಎಂದು ಆರೋಪಿಸಿ ದಲಿತ ಯುವಕನೋರ್ವನಿಗೆ ಮಾರಾಣಾಂತಿಕವಾಗಿ ಥಳಿಸಿ, ಯಾರಿಗೂ ಹೇಳದಂತೆ ಬೆದರಿಕೆ ಹಾಕಿರುವ ಘಟನೆ ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಐಡಿ ಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ಯುವಕನ ಮರ್ಮಾಂಗಕ್ಕೆ ಏಟು ಬಿದ್ದ ಪರಿಣಾಮ ನಿನ್ನೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಪುರುಷೋತ್ತಮ್ ಪ್ರಸಾದ್ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುವಕನ ತಂದೆ ನೀಡಿರುವ ದೂರಿನ್ವಯ ಬಾಲಾಜಿ ಬಾಲಾಜಿ ರೆಡ್ಡಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಮಧುಗಿರಿ ತಾಲೂಕಿನ ಐಡಿಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಬಸಪ್ಪ ಎಂಬವರ ಪುತ್ರ ಪುರುಷೋತ್ತಮ್ ಪ್ರಸಾದ್ ತನ್ನ ಸ್ನೇಹಿತರೊಂದಿಗೆ ಕೊಡಿಗೇನಹಳ್ಳಿ ಹೋಬಳಿಯ ಕಾಳೇನಹಳ್ಳಿ ಗ್ರಾಮದ ಬಾಲಾಜಿ ರೆಡ್ಡಿ ಎಂಬವರ ತೋಟದಲ್ಲಿ ಎಂಟು ದಿನಗಳು ಕೂಲಿಮಾಡಿದ್ದಾರೆ ಎನ್ನಲಾಗಿದೆ.
ಸೆ.29ರಂದು ಕೂಲಿ ಹಣ ಕೇಳಿದ್ದಕ್ಕೆ ತೋಟದಲ್ಲಿ ಬಾಳೆ ಗೊನೆಗಳನ್ನು ಕಳವು ಮಾಡಿದ್ದೀಯ ಎಂದು ಆರೋಪಿಸಿ ಅವಾಚ್ಯಶಬ್ದಗಳಿಂದ ಜಾತಿ ನಿಂದನೆ ಮಾಡಿ ತೋಟದ ಮಾಲಕ ಬಾಲಾಜಿ ರೆಡ್ಡಿ ಹಾಗೂ ಸಹಚರರಾದ ರಾಮಚಂದ್ರಪ್ಪ, ವಿಶ್ವನಾಥ ರೆಡ್ಡಿ ಮತ್ತಿತರರು ಸೇರಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಯುವಕ ಅಸ್ವಸ್ಥನಾದಾಗ ಬಾಳೆಗೊನೆ ಕಳವು ಆರೋಪ ಮಾಡಿ ಆತನನ್ನು ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಯವಕನ ಸಂಬಂಧಿಕರು ಹಾಗೂ ಸ್ಥಳೀಯರು ರಾಜಿ ಸಂಧಾನ ನಡೆಸಿ ಮನೆಗೆ ಯುವಕನನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.
ಯುವಕನಿಗೆ ಅ.15ರಂದು ಆರೋಗ್ಯದಲ್ಲಿ ಏರುಪೇರಾದಗ ಯುವಕನ ತಂದೆ ಐಡಿಹಳ್ಳಿ ಆಸ್ಪತ್ರೆಗೆ ಪುತ್ರನನ್ನು ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಮಧುಗಿರಿ ಆಸ್ಪತ್ರೆಗೆ ದಾಖಲಿಸುವಂತೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಯುವಕನಿಗೆ ಮಧುಗಿರಿ ಸರಕಾರಿ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಿ, ಯುವಕನ ಮರ್ಮಾಂಗಕ್ಕೆ ಪೆಟ್ಟಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಯುವಕನನ್ನು ತುಮಕೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಸೂಚಿಸಿದ್ದರು ಎನ್ನಲಾಗಿದೆ. ತುಮಕೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಯುವಕ ಅ.17ರಂದು ಬೆಳಗಿನ ಜಾವ 6:15ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
''ನನ್ನ ಮಗನ ಸಾವಿಗೆ ಗ್ರಾಮದ ರೆಡ್ಡಿ ಜನಾಂಗಕ್ಕೆ ಸೇರಿದ ರಾಮಚಂದ್ರಪ್ಪ, ಬಾಲಾಜಿ, ವಿಶ್ವನಾಥರೆಡ್ಡಿ ಮತ್ತು ಅವರ ಸಂಗಡಿಗರು ಹಲ್ಲೆ ಮಾಡಿರುವುದೇ ಕಾರಣ'' ಎಂದು ಬಸಪ್ಪ ಆರೋಪಿಸಿದ್ದಾರೆ.
ಹಲವು ದಲಿತ ಸಂಘಟನೆಗಳ ಮುಖಂಡರು ಮೃತ ಪುರುಷೋತ್ತಮ್ ಪ್ರಸಾದ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.