ಟ್ವಿಟರ್ ಖಾತೆ ನಿರ್ಬಂಧ: ಮುಚ್ಚಿದ ಲಕೋಟೆಯಲ್ಲಿನ ಮಾಹಿತಿ ಪರಿಶೀಲಿಸಿದ ಹೈಕೋರ್ಟ್

Update: 2022-10-17 18:18 GMT

ಬೆಂಗಳೂರು, ಅ.17: ಟ್ವಿಟರ್ ಖಾತೆಗಳಿಂದ ತೆಗೆದು ಹಾಕಲಾಗಿದ್ದ ಟ್ವೀಟ್ ಸಂದೇಶಗಳನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಲಾಯಿತು. ಇದರಲ್ಲಿ ಇರುವ ಮಾಹಿತಿಯನ್ನು ಹೈಕೋರ್ಟ್ ಪರಿಶೀಲನೆ ನಡೆಸಿತು. 

ಹೊಸ ಮಾಹಿತಿ ತಂತ್ರಜ್ಞಾನ(ಐಟಿ) ನಿಯಮಗಳ ಅಡಿಯಲ್ಲಿ ವ್ಯಕ್ತಿಗತವಾಗಿ ಹಲವು ಖಾತೆಗಳನ್ನು ನಿಷೇಧಿಸುವಂತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ಆದೇಶಗಳನ್ನು ಪ್ರಶ್ನಿಸಿ ‘ಟ್ವಿಟರ್ ಇನ್‌ಕಾರ್ಪೊರೇಟೆಡ್’ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಕೇಂದ್ರ ಸರಕಾರ ಮತ್ತು ಅರ್ಜಿದಾರರ ಪರ ವಕೀಲರು, ನಿರ್ಬಂಧ ಮಾಡಲಾಗಿದ್ದ ಖಾತೆಗಳಲ್ಲಿನ ಮಾಹಿತಿಯುಳ್ಳ ದಾಖಲೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಈ ದಾಖಲೆಗಳನ್ನು ಪರಿಶೀಲನೆ ನಡೆಸಿದ ನ್ಯಾಯಪೀಠ, ಮತ್ತೆ ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ಇಡಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು. 

ಹಿರಿಯ ವಕೀಲ ಅರವಿಂದ ದತ್ತಾರ ಅವರು, ಅಮೆರಿಕಾ, ಆಸ್ಟೇಲಿಯಾ ಸೇರಿ ಹಲವು ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಬಗ್ಗೆ 300 ಪುಟಗಳ ವಿವರಣೆ ಸಲ್ಲಿಸಿದರು. ಆಸ್ಟೇಲಿಯಾದಲ್ಲಿ ಸುರಕ್ಷತಾ ಆಯುಕ್ತರು ಟ್ವೀಟ್ ಅಂಶಗಳನ್ನು ರದ್ದು ಮಾಡುವುದಕ್ಕೆ ನೋಟಿಸ್ ನೀಡುವ ಪ್ರಕ್ರಿಯೆ ಇದೆ. ಹಾಗೆಯೇ ಅದನ್ನು ಪ್ರಶ್ನೆ ಮಾಡುವುದಕ್ಕೆ ಅವಕಾಶವಿದೆ. ಆದರೆ, ಭಾರತದಲ್ಲಿ ಐಟಿ ನಿಯಮಗಳ ಅಡಿಯಲ್ಲಿ ಖಾತೆಗಳನ್ನು ರದ್ದು ಮಾಡಬಹುದಾಗಿದೆ. ಅದನ್ನು ಪ್ರಶ್ನೆ ಮಾಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ, ಕೋರ್ಟ್ ಮೆಟ್ಟಿಲೇರಬೇಕಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ಟ್ವಿಟರ್ ಪರ ವಾದಿಸಿದ ಮತ್ತೊಬ್ಬ ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ, ಗೊಂದಲಕರವಾಗಿರುವ ಟ್ವೀಟ್‌ಗಳನ್ನು ನಿರ್ಬಂಧಿಸಿದರೆ ತಪ್ಪಿಲ್ಲ. ಆದರೆ, ಖಾತೆಯನ್ನೇ ನಿರ್ಬಂಧಿಸುವುದು ಸರಿಯಲ್ಲ. ಹೀಗಾಗಿ, ಕೇಂದ್ರ ಸರಕಾರದ ನೋಟಿಸ್ ಅನ್ನು ರದ್ದು ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News