ಬಾಗಲಕೋಟೆ | ಯುವಪ್ರೇಮಿಗಳ ಮರ್ಯಾದಾ ಹತ್ಯೆ: ಬಾಲಕಿಯ ಸಹೋದರ ಸಹಿತ ಮೂವರ ಬಂಧನ
ಬಾಗಲಕೋಟೆ, ಅ.18: ಎರಡು ವಾರಗಳ ಹಿಂದೆ ನಡೆದ ಯುವಪ್ರೇಮಿಗಳ ನಾಪತ್ತೆ ಪ್ರಕರಣಕ್ಕೆ ತಿರುವು ಲಭಿಸಿದ್ದು, ಅವರಿಬ್ಬರ ಮರ್ಯಾದಾ ಹತ್ಯೆ ನಡೆದಿರುವುದಾಗಿ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ಅಪ್ರಾಪ್ತ ವಯಸ್ಸಿನ ಯುವತಿಯ ಸಹೋದರ, ಮಾವಂದಿರು ಸೇರಿದಂತೆ ಮೂವರನ್ನು ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಬೇವಿನ ಮಟ್ಟಿ ಗ್ರಾಮದ ನಿವಾಸಿ ಪರಸಪ್ಪ ಎಂಬವರ ಪುತ್ರಿ ರಾಜೇಶ್ವರಿ ಕರಡಿ(17) ಮತ್ತು ಗದಗ ಜಿಲ್ಲೆಯ ನರಗುಂದ ನಿವಾಸಿ ವಿಶ್ವನಾಥ ನೆಲಗಿ(22) ಕೊಲೆಯಾದ ಪ್ರೇಮಿಗಳು. ರಾಜೇಶ್ವರಿಯ ಅಣ್ಣ ರವಿ ಹುಲ್ಲಣ್ಣವರ್(19), ಮಾವಂದಿರಾದ ಹನುಮಂತ ಮಲ್ನಾಡದ(22) ಹಾಗೂ ಬೀರಪ್ಪ ದಳವಾಯಿ(18) ಎಂಬವರು ಹತ್ಯೆ ಆರೋಪಿಗಳಾಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ವಿಶ್ವನಾಥ ನೆಲಗಿ ನಾಪತ್ತೆಯಾಗಿರುವುದಾಗಿ ಅವರ ತಂದೆ ಅ.3ರಂದು ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ನಡುವೆ ತನ್ನ ಮಗಳು ರಾಜೇಶ್ವರಿಯನ್ನು ಯಾರೋ ಅಪಹರಿಸಿರುವುದಾಗಿ ಅ.11ರಂದು ಪರಸಪ್ಪ ಬಾಗಲಕೋಟೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರಿಗೆ ನರಗುಂದದಲ್ಲಿ ನಾಪತ್ತೆಯಾಗಿರುವ ವಿಶ್ವನಾಥ್ ಮತ್ತು ರಾಜೇಶ್ವರಿ ಪ್ರೇಮಿಗಳಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಸಂಶಯಗೊಂಡ ಪೊಲೀಸರು ರಾಜೇಶ್ವರಿಯ ಸಹೋದರ ರವಿ ಹುಲ್ಲಣ್ಣವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಯುವ ಜೋಡಿ ಕೊಲೆ ಕೃತ್ಯ ಬಯಲಾಗಿದೆ. ಯುವತಿಯ ತಂದೆಯ ಕುಮ್ಮಕ್ಕಿನಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಶಿಷ್ಟ ವರ್ಗಕ್ಕೆ ಸೇರಿರುವ ವಿಶ್ವನಾಥ್ ಜೊತೆಗಿನ ಪ್ರೀತಿಗೆ ರಾಜೇಶ್ವರಿಯ ಪೋಷಕರ ತೀವ್ರ ವಿರೋಧವಿತ್ತೆನ್ನಲಾಗಿದೆ. ಇದೇ ಕಾರಣಕ್ಕೆ ಈ ಹತ್ಯೆ ನಡೆದಿದೆ. ಪ್ರೇಮಿಗಳನ್ನು ಒಂದುಗೂಡಿಸುವುದಾಗಿ ನಂಬಿಸಿ ವಿಶ್ವನಾಥ್ ರನ್ನು ನರಗುಂದದಿಂದ ಕರೆಸಿರುವ ಆರೋಪಿಗಳಾದ ರವಿ ಹುಲ್ಲಣ್ಣವರ, ಹನುಮಂತ ಮಲ್ನಾಡದ ಹಾಗೂ ಬೀರಪ್ಪ ದಳವಾಯಿ ಅವರು ರಾಜೇಶ್ವರಿಯನ್ನು ಕೂಡಾ ವಾಹನದಲ್ಲಿ ಕರೆದೊಯ್ದು ಅ.1ರಂದು ಮುಂಜಾನೆ 4 ಗಂಟೆ ಸುಮಾರಿಗೆ ಇಬ್ಬರನ್ನೂ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಇಬ್ಬರು ಮೃತದೇಹಗಳನ್ನು ಆಲಮಟ್ಟಿ ರಸ್ತೆ ಸೇತುವೆಯಿಂದ ಕೃಷ್ಣಾ ನದಿಗೆ ಎಸೆದಿರುವುದಾಗಿ ಆರೋಪಿಗಳು ಪೊಲೀಸ್ ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೊಲೆಯಾದ ಪ್ರೇಮಿಗಳ ಮೃತದೇಹಗಳಿಗಾಗಿ ಶೋಧ ನಡೆಸುತ್ತಿದ್ದಾರೆ.