ಬಿಲ್ಕೀಸ್ ಬಾನು ಪ್ರಕರಣ | ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
ಬೆಂಗಳೂರು, ಅ.18: ಬಿಲ್ಕೀಸ್ ಬಾನು ಪ್ರಕರಣದ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಲು ಆದೇಶಿಸಿರುವ ಕೇಂದ್ರ ಗೃಹ ಸಚಿವಾಲಯದ ನಿರ್ಧಾರವು, ಬಿಜೆಪಿ ರಾಷ್ಟ್ರೀಯ ನಾಯಕರ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಇಂತಹ ಅಮಾನವೀಯ ಕೃತ್ಯ ಎಸಗಿರುವವರಿಗೆ ಕ್ಷಮಾದಾನ ನೀಡಿರುವವರಿಗೆ ನಾಚಿಕೆಯಾಗಬೇಕು. ಅಮಿತ್ ಶಾ ರಾಜೀನಾಮೆ ನೀಡಿ, ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಮಹಿಳಾ ಸಂಸದರಾದ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ ಎಲ್ಲಿದ್ದಾರೆ. ಮಹಿಳೆಯರ ವಿಚಾರದಲ್ಲಿಯೂ ಅವರು ಎದ್ದು ನಿಲ್ಲದಿದ್ದರೆ, ಅವರು ತಮ್ಮ ಹುದ್ದೆಗಳಲ್ಲಿ ಮುಂದುವರೆಯಲು ಅರ್ಹರಲ್ಲ. ರಾಜಕೀಯ ಕಾರಣಗಳಿಗಾಗಿ ತಮ್ಮದೇ ಪಕ್ಷ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವ ವಿಚಾರ ತಿಳಿದು ಅವರು ಶಾಂತಿಯುತವಾಗಿ ನಿದ್ರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಇಡೀ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಬಾಂಧವ್ಯದ ಬಗ್ಗೆ ಗೊತ್ತಿದೆ. ಆದರೆ, ತನ್ನ ಮಗು ಹಾಗೂ ಭ್ರೂಣವನ್ನು ಕಳೆದುಕೊಂಡ ತಾಯಿಯ ನೋವು ನರೇಂದ್ರ ಮೋದಿಗೆ ಯಾಕೆ ಕಾಣಿಸುತ್ತಿಲ್ಲ. ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವ ಬಿಜೆಪಿ ಸರಕಾರದ ಅಮಾನವೀಯ ನಿರ್ಧಾರವನ್ನು ಭಾರತ ಎಂದಿಗೂ ಕ್ಷಮಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
.@HMOIndia's order to release the convicts in Bilkis Bano case, exposes the cruel mindset of @BJP4India leaders. They have brought shame to the entire country by granting pardon to these inhuman vultures.@AmitShah should resign & apologise to the entire nation.#BilkisBano
— Siddaramaiah (@siddaramaiah) October 18, 2022