ತುಮಕೂರು | ಪತ್ನಿ, ಮಗುವಿನ ಕೊಲೆ; ಆರೋಪಿ ಪತಿಯ ಬಂಧನ
ತುಮಕೂರು, ಅ.19: ವ್ಯಕ್ತಿಯೋರ್ವ ಪತ್ನಿ ಹಾಗೂ ಮಗುವನ್ನು ಹಾರೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಿಟ್ಟೂರು ಹೋಬಳಿ ಮಾವಿನಹಳ್ಳಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಕೊಲೆಯಾದವರನ್ನು ಇಲ್ಲಿನ ನಿವಾಸಿ ಕಾವ್ಯಾ(25) ಹಾಗೂ ಅವರ ಪುತ್ರ ಜೀವನ್ ಎಂದು ಗುರುತಿಸಲಾಗಿದೆ. ಕಾವ್ಯಾರ ಪತಿ ಸ್ವಾಮಿ(33) ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಕೃತ್ಯದ ಬಳಿ ಪರಾರಿಯಾಗಲು ಯತ್ನಿಸಿದ ಈತನನ್ನು ಹಿಡಿದು ಕಟ್ಟಿ ಹಾಕಿ ಚೇಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ವಾಮಿ ಮತ್ತು ಕಾವ್ಯಾ ಆರು ವರ್ಷಗಳ ಹಿಂದೆ ವಿವಾಹಿತರಾಗಿದ್ದರು. ಬಳಿಕ ಇವರೊಳಗೆ ಮನಸ್ತಾಪ ಉಂಟಾಗಿದ್ದರಿಂದ ಕಾವ್ಯಾ ತವರು ಮನೆ ಸೇರಿದ್ದರು. ನಾಲ್ಕು ವರ್ಷಗಳ ಕಾಲ ಕಾವ್ಯಾ ತವರಿನಲ್ಲೇ ಇದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೂರು ದಿನಗಳ ಹಿಂದೆ ರಾಜಿ ಪಂಚಾಯಿತಿಕೆ ಮೂಲಕ ಪತಿ-ಪತ್ನಿಯನ್ನು ಒಂದುಗೂಡಿಸಿದ್ದರು. ಆದರೆ ಇವರೊಳಗೆ ಮತ್ತೆ ಜಗಳ ನಡೆದಿದ್ದು, ಈ ವೇಳೆ ಸ್ವಾಮಿ ಹಾರೆಯಿಂದ ಹೊಡದು ಪತ್ನಿ ಹಾಗೂ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸ್ವಾಮಿ ಗ್ರಾಮದಲ್ಲಿ ಅರ್ಚಕ ವೃತ್ತಿ ಮಾಡಿಕೊಂಡಿದ್ದನೆನ್ನಲಾಗಿದ್ದು, ಇತ್ತೀಚೆಗೆ ಅರ್ಚಕ ವೃತ್ತಿಯಿಂದ ಆತನನ್ನು ತೆಗೆದುಹಾಕಲಾಗಿತ್ತೆನ್ನಲಾಗಿದೆ.
ಈ ಬಗ್ಗೆ ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.