ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಪ್ರೀಮಿಯಂ ರಹಿತ 50 ಲಕ್ಷ ರೂ. ಅಪಘಾತ ವಿಮೆ

Update: 2022-10-19 12:57 GMT

ಇದೇ ಮೊದಲ ಬಾರಿಗೆ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ರೂ.50 ಲಕ್ಷ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿ pic.twitter.com/JxzDBAKXuS

— KSRTC (@KSRTC_Journeys) October 19, 2022

ಬೆಂಗಳೂರು, ಅ. 19: ಕೆಎಸ್ಸಾರ್ಟಿಸಿ ಸಿಬ್ಬಂದಿಗೆ 50 ಲಕ್ಷ ರೂ. ಅಪಘಾತ ವಿಮಾ ಯೋಜನೆಯನ್ನು ಇದೇ ಮೊದಲ ಬಾರಿಗೆ ಜಾರಿಗೊಳಿಸಿದ್ದು, ನಿಗಮವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಗೆ ಸೋಮವಾರ ಸಹಿ ಹಾಕಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೇತನ ಖಾತೆಯನ್ನು ಹೊಂದಿರುವ ನಿಗಮದ ನೌಕರರಿಗೆ ‘ಪ್ರೀಮಿಯಂ ರಹಿತ’ ವೈಯಕ್ತಿಕ ಅಪಘಾತ ವಿಮೆಯನ್ನು ಒಳಗೊಂಡಿದೆ. ಈ ವೈಯಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಫಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ 50 ಲಕ್ಷಗಳ ರೂ. ಪರಿಹಾರದ ಹಣ ಕೂಡಲೇ ದೊರೆಯಲಿದೆ. ಅಫಘಾತದಲ್ಲಿ ಸಿಬ್ಬಂದಿಗಳು ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ 20 ರೂ. ಲಕ್ಷಗಳ ಹಣ ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯ ಉಂಟಾದಲ್ಲಿ ರೂ.10 ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ. 

ಸಿಬ್ಬಂದಿಗಳ ಅಪಘಾತದಲ್ಲಿನ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಗರಿಷ್ಟ 10 ಲಕ್ಷ ರೂ., ಔಷಧಗಳ ಖರೀದಿಗಾಗಿ ಗರಿಷ್ಟ 5 ಲಕ್ಷ ರೂ., ಕೋಮಾದಲ್ಲಿ ಮೃತಪಟ್ಟರೆ ರೂ.50 ಲಕ್ಷದೊಂದಿಗೆ ಹೆಚ್ಚುವರಿ 2 ಲಕ್ಷ ರೂ. ನೀಡಲಾಗುತ್ತದೆ. ಏರ್ ಅಂಬ್ಯೂಲೆನ್ಸ್ ಸೇವೆಗೆ 10 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುವುದು. 

ಸಿಬ್ಬಂದಿಗಳು ಅಪಘಾತದಲ್ಲಿ ಮೃತಪಟ್ಟರೆ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಟ 5 ಲಕ್ಷ ರೂ. ಹಾಗೂ ಹೆಣ್ಣು ಮಗಳ ವಿವಾಹಕ್ಕೆ ಗರಿಷ್ಟ 5 ಲಕ್ಷಗಳ ರೂ.ವರೆಗೆ ಆರ್ಥಿಕ ಸಹಾಯವನ್ನು ಈ ವಿಮಾ ಯೋಜನೆಯು ಒಳಗೊಂಡಿರುತ್ತದೆ. ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯಕ್ತ ಕ್ರಮವೆಂದರೆ ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News