ಪರೇಶ್ ಮೆಸ್ತಾ ಪ್ರಕರಣ ಮರು ತನಿಖೆಗೆ ಆಗ್ರಹ: ಸಿಎಂ ಬೊಮ್ಮಾಯಿಗೆ ಮನವಿ
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಕುಮಟಾ ಭಾಗದಲ್ಲಿ ನಡೆದಿರುವ ಪರೇಶ್ ಮೆಸ್ತಾ ಸಾವಿನ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಆಗ್ರಹಿಸಿ ಪರೇಶ್ ಮೆಸ್ತಾ ತಂದೆ ಕಮಾಲಾಕರ್ ಮೆಸ್ತಾ ಅವರು ಇಂದು ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
''ನನ್ನ ಮಗ ಪರೇಶ್ ಮೆಸ್ತಾನ ಸಾವು ಅಸಹಜ ಸಾವಾಗಿದ್ದು, ಸಿಬಿಐ ಸಾಕ್ಷಾಧಾರಗಳು ಲಭ್ಯ ಆಗಿಲ್ಲ ಎಂಬ ಕಾರಣಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದು, ಇದರಿಂದ ನನಗೆ ನ್ಯಾಯ ವಂಚನೆ ಆಗಿದೆ. ನನ್ನ ಮಗ ಪರೇಶ್ ಮೆಸ್ತಾನ ಪ್ರಕರಣವನ್ನು ಸಿಬಿಐಗೆ ನೀಡುವಾಗ 4 ತಿಂಗಳ ಅವಧಿ ಮೀರಿದ್ದು, ಬಹುತೇಕ ಸಾಕ್ಷಾಧಾರಗಳು ನಾಶ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಮತ್ತಷ್ಟು ಆಳವಾದ ತನಿಖೆ ಮಾಡಬೇಕಾದ ಅವಶ್ಯಕತೆ ಇರುವುದರಿಂದ ಪುನರಪಿ ಸಿಬಿಐ ತನಿಖೆಗೆ ಆದೇಶ ನೀಡಬೇಕೆಂದು'' ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದಾರೆ.
ಕಮಲಾಕರ್ ಮೆಸ್ತಾ ಅವರ ಮನವಿಯನ್ನು ಆಲಿಸಿದ ಮಾನ್ಯ ಸಿಎಂ ಬಸವರಾಜ ಬೊಮ್ಮಾಯಿ ''ತಂದೆಯಾಗಿ ನಿಮ್ಮ ಕಷ್ಟ ಸರ್ಕಾರ ಅರ್ಥಮಾಡಿಕೊಳ್ಳುತ್ತದೆ. ಮನವಿಯನ್ನು ಪರಿಶೀಲಿಸಿ, ಪುನರ್ ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ'' ಭರವಸೆ ನೀಡಿದರು.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು, ಕಾರ್ಮಿಕ ಸಚಿವರಾದ ಶ್ರೀ ಶಿವರಾಮ್ ಹೆಬ್ಬಾರ್, ಮೀನುಗಾರಿಗಾ ಸಚಿವರಾದ ಎಸ್.ಅಂಗಾರ, ಶಾಸಕರಾದ ದಿನಕರ್ ಶೆಟ್ಟಿ, ಸುನಿಲ್ ನಾಯಕ್ ಹಾಗೂ ಕುಮಾರ ನಾರಾಯಣ ಮಾರ್ಕಾಂಡೇ ಅವರು ಜೊತೆಯಲ್ಲಿ ಇದ್ದರು.