ಬ್ಯಾರಿ ಭಾಷೆ ಸಹಿತ ಕರಾವಳಿಯ ಭಾಷೆಗಳಲ್ಲಿ ಕನ್ನಡದ ಜೊತೆಗೆ ಬಿಡಿಸಲಾರದ ನಂಟು ಇದೆ : ಮುಹಮ್ಮದ್ ಅಲಿ

Update: 2022-10-20 12:47 GMT

ಕೊಣಾಜೆ: "ಕನ್ನಡ, ತುಳು, ಬ್ಯಾರಿ, ಕೊಂಕಣಿ ಸಹಿತವಾಗಿ ಹಲವು ಭಾಷೆಗಳನ್ನೊಳಗೊಂಡಿರುವ ಕರಾವಳಿಯು ಭಾಷಾ ಸಾಮರಸ್ಯವನ್ನು ಬದುಕಿ ತೋರಿದ ನಾಡು. ಬ್ಯಾರಿ ಭಾಷೆ ಸಹಿತ ಕರಾವಳಿಯ ಭಾಷೆಗಳಲ್ಲಿ ಕನ್ನಡದ ಜೊತೆಗೆ ಬಿಡಿಸಲಾರದ ನಂಟು ಇದೆ" ಎಂದು ಬ್ಯಾರಿ ವಾರ್ತೆ ಮಾಸಿಕ, ಮಂಗಳೂರು ಇದರ ಉಪ ಸಂಪಾದಕರಾಗಿರುವ ಮುಹಮ್ಮದ್ ಅಲಿ ಕಮ್ಮರಡಿ ಅವರು ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕದ ವತಿಯಿಂದ ದೇರಳಕಟ್ಟೆಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಭಾಷಾ ಸಾಮರಸ್ಯ ಚಿಂತನ ಗೋಷ್ಠಿಯಲ್ಲಿ ಬ್ಯಾರಿ - ಕನ್ನಡ ಬಾಂಧವ್ಯ ಎಂಬ ವಿಷಯದ ಕುರಿತಾಗಿ ಮಾತನಾಡಿದರು.

"ಸಾವಿರದ ಇನ್ನೂರು ವರ್ಷಗಳ ಇತಿಹಾಸ ಇರುವ ಬ್ಯಾರಿ ಭಾಷೆ ಕೇವಲ ಆಡು ಮಾತಾಗಿ ಶಕ್ತವಾಗಿ ಉಳಿದುಕೊಂಡು ಬಂದಿರುವುದು ವಿಶೇಷವಾಗಿದೆ. ಬರವಣಿಗೆಗೆ ಕನ್ನಡದ ಲಿಪಿಯನ್ನೇ ಬಳಸುವ ಬ್ಯಾರಿ ಭಾಷೆ ಕನ್ನಡ ಸಂಸ್ಕೃತಿಯ ಜೊತೆಗೆ ಅವಿನಾಭಾವ ಸಂಬಂಧ ವನ್ನು ಹೊಂದಿದೆ" ಎಂದು ಹೇಳಿದರು.

ಸಮಾರಂಭದಲ್ಲಿ ತುಳು - ಕನ್ನಡ ಬಾಂಧವ್ಯ ಎಂಬ ವಿಷಯದ ಕುರಿತಾಗಿ ಮಾತನಾಡಿದ ಮಂಚಿ, ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಶಿಕ್ಷಕಿಯಾಗಿರುವ ವಿಜಯಲಕ್ಷ್ಮಿ ಕಟೀಲು ಇವರು "ತುಳು ಮಾತನಾಡುವವರು ಮಾತ್ರ ತುಳುವರಲ್ಲ, ತುಳು ನಾಡಿನಲ್ಲಿ ಬದುಕುವವರೆಲ್ಲಾ ತುಳುವರೇ. ಕರಾವಳಿಯ ಕನ್ನಡ ಪಠ್ಯದಲ್ಲೂ ತುಳು ಸಂಸ್ಕೃತಿಯ ವಿಚಾರಗಳು ಬರುವಂತಾಗಲಿ" ಎಂದು ಹೇಳಿದರು.

ಭಾಷೆ ಬಾಂಧವ್ಯದ ಕೊಂಡಿ : ಧನಂಜಯ ಕುಂಬ್ಳೆ

ದಕ ಜಿಲ್ಲಾ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ "ಭಾಷೆ ಬಾಂಧವ್ಯದ ಕೊಂಡಿ. ಹೆಚ್ಚು ಭಾಷೆ ಕಲಿತಷ್ಟು ಸಾಮರಸ್ಯದ ಭಾವನೆ ಗಟ್ಟಿಗೊಳ್ಳುತ್ತದೆ. ತುಳುವರು ಬ್ಯಾರಿ ಭಾಷೆಯನ್ನು, ಬ್ಯಾರಿ ಭಾಷೆಯವರು ತುಳುವನ್ನು ಹಾಗೆಯೇ ಎಲ್ಲರೂ ಕನ್ನಡವನ್ನು ಚೆನ್ನಾಗಿ ಕಲಿತಾಗ ಕರಾವಳಿಯ ಸಾಮರಸ್ಯದ ಭಾವನೆ ಬಲಗೊಳ್ಳುತ್ತದೆ" ಎಂದರು. ಸಮಾರಂಭದಲ್ಲಿ ಶಾಲಾ ಎಸ್ ಡಿ ಯಂ ಸಿ ಯ ಉಪಾಧ್ಯಕ್ಷರಾದ ರಾಹಿಲಾ ಅವರು ಉಪಸ್ಥಿತರಿದ್ದರು.

ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ನೀತಾ ಗಟ್ಟಿ ಅವರು ದೀಪ ಬೆಳಗಿಸಿ "ಭಾಷೆ ಜಗಳಕ್ಕೆ ಕಾರಣವಾಗಬಾರದು. ಅದು ಜನರ ಮನಸ್ಸನ್ನು ಬೆಸೆಯಬೇಕು. ನೆಲದ ಭಾಷೆಯ ಕುರಿತು ಅಭಿಮಾನ ತಾಳಬೇಕು" ಎಂದು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಆಲಿಸ್ ವಿಮಲ, ನೇತಾಜಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ನಯನಾ, ಉಳ್ಳಾಲ ಕಸಾಪ ಕಾರ್ಯದರ್ಶಿ ಎಡ್ವರ್ಡ್ ಲೋಬೋ, ಸದಸ್ಯ ಮಾಧವ ಉಳ್ಳಾಲ ಉಪಸ್ಥಿತರಿದ್ದರು.

ಘಟಕದ ಕೋಶಾಧಿಕಾರಿಗಳಾದ ಲಯನ್ ಚಂದ್ರಹಾಸ ಶೆಟ್ಟಿ ಇವರು ಸ್ವಾಗತಿಸಿದರು. ಶಾಲಾ ಅಧ್ಯಾಪಿಕೆಯಾದ ವೀಣಾ ಡೇಸಾ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಗೀತ ಗಾಯನ, ಕಥಾಭಿನಯ, ಹಾಸ್ಯ ಭಾಷಣ ಸ್ಪರ್ಧೆ ಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಉಳ್ಳಾಲ ಕಸಾಪ ಘಟಕದ ಪದಾಧಿಕಾರಿಗಳಾದ ಆನಂದ ಅಸೈಗೋಳಿ, ಗುಣಾಜೆ ರಾಮಚಂದ್ರ ಭಟ್, ಮಂಜುಳಾ ಜಿ ರಾವ್ ಇರಾ, ಅಮಿತಾ ಆಳ್ವ, ಅಶ್ವಿನಿ ಕೂರ್ನಾಡು, ಅಮರ್ ಪೂಪಾಡಿಕಲ್ಲು, ರಮೇಶ್ ಬಿ ತೊಕ್ಕೊಟ್ಟು, ಸಾಹಿತಿ ಮಹಮ್ಮದ್ ಬಡ್ಡೂರು ಇವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News