ಮೈಸೂರು ಭಾಗದ JDS ಅಭ್ಯರ್ಥಿಗಳ ಪಟ್ಟಿ; ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ.ದೇವೇಗೌಡ ಸ್ಪರ್ಧೆ

Update: 2022-10-21 09:58 GMT

ಮೈಸೂರು: ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಗುರುವಾರ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಮನೆಗೆ ದಿಢೀರ್ ಭೇಟಿ ನೀಡಿದ ಬಳಿಕ 'ಜೆಡಿಎಸ್ ಪಕ್ಷ ಬಿಟ್ಟು ಹೋಗಲ್ಲ, ಕಾಂಗ್ರೆಸ್- ಬಿಜಪಿ ಸೇರಲ್ಲ' ಎಂದು ಘೋಷಿಸಿದ್ದ ಜಿಟಿಡಿ, ಮುಂದಿನ ವಿಧಾನಸಭೆ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದೇನೆ ಎಂದು ಹೇಳಿದ್ದಾರೆ. 

ಇಂದು ಚಾಮುಂಡೇಶ್ವರಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಭಾಗದ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದರು. 

''ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ನಾನೇ ಸ್ಪರ್ಧೆ ಮಾಡಲಿದ್ದೇನೆ. ಇದನ್ನು ಪಕ್ಷದ ವರಿಷ್ಠರೇ ಹೇಳಿದ್ದಾರೆ. ಇನ್ನು  ಹುಣಸೂರು ಕ್ಷೇತ್ರದಿಂದ ಪುತ್ರ ಹರೀಶ್ ಗೌಡ ಸ್ಪರ್ಧಿಸಲಿದ್ದು,  ಕೆ.ಆರ್.ನಗರಕ್ಕೆ ಸಾ.ರಾ ಮಹೇಶ್, ಪಿರಿಯಾಪಟ್ಟಣಕ್ಕೆ ಕೆ.ಮಹದೇವ್, ಟಿ.ನರಸೀಪುರಕ್ಕೆ ಅಶ್ಚಿನ್ ಮತ್ತು ಎಚ್.ಡಿ.ಕೋಟೆಯಲ್ಲಿ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್‌ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ'' ಎಂದು ತಿಳಿಸಿದರು. 

ಇದೇ ವೇಳೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ''ನಾನು ನಿನ್ನೆಯಿಂದಲೇ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ.‌ಮನಸ್ಸು ಮೂರು ವರ್ಷಗಳ ನಂತರ ಸಮಾಧಾನದಲ್ಲಿದ್ದೇನೆ. ನಾನು ಮತ್ತು ನನ್ನ ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನು ಯಾವ ಗೊಂದಲಗಳು ಉಳಿದಿಲ್ಲ. ಎಚ್.ಡಿ.ದೇವೇಗೌಡರ ಉತ್ಸಾಹ ನೋಡಿ ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ. ಅವರನ್ನು ಸಂತೋಷವಾಗಿಡುವುದೇ ನಮ್ಮ ಸಂತೋಷ'' ಎಂದು ಹೇಳಿದರು.

''ಅಪಸ್ವರ ಎತ್ತುವವರು ಪಕ್ಷದಿಂದ ಹೊರ ಹೋಗಬಹುದು. ಮೈಸೂರು ಜಿಲ್ಲೆಯ ಉಸ್ತುವಾರಿಯನ್ನು ಜಿ.ಟಿ.ದೇವೇಗೌಡಗೆ ಕೊಟ್ಟಿದ್ದೇನೆ. ಅವರ ನಾಯಕತ್ವದಲ್ಲೇ ಎಲ್ಲವೂ ನಡೆಯಲಿದೆ''

- ಎಚ್.ಡಿ ದೇವೇಗೌಡ- ಜೆಡಿಎಸ್ ವರಿಷ್ಠ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News