ಭೂತಕೋಲ ಮೂಲ ನಿವಾಸಿಗಳದ್ದು ಎಂಬ ನಟ ಚೇತನ್ ಹೇಳಿಕೆ ಸಮರ್ಥಿಸಿದ ಸಂತೋಷ್ ಗುರೂಜಿ
ಬೆಂಗಳೂರು: 'ಭೂತಕೋಲ ಹಿಂದೂ ಸಂಸ್ಕೃತಿ ಎಂಬ ರಿಷಬ್ ಶೆಟ್ಟಿ ಹೇಳಿಕೆ ಸರಿಯಲ್ಲ' ಎಂಬ ನಟ ಚೇತನ್ ಅಹಿಂಸಾ ಹೇಳಿಕೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಚೇತನ್ ಅವರ ಈ ಹೇಳಿಕೆಯನ್ನು ಸಂತೋಷ್ ಗುರೂಜಿ ಅವರು ಸಮರ್ಥಿಸುವ ಮಾತುಗಳನ್ನಾಡಿದ್ದಾರೆ.
HateDetector ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಸಂತೋಷ್ ಗುರೂಜಿ ಅವರು ತುಳುನಾಡಿನ ಬೂತಾರಾಧನೆ ಕುರಿತು ಮಾತನಾಡಿದ್ದಾರೆ.
''ಕರಾವಳಿಯಲ್ಲಿ ಇಡೀ ಮೂಲನಿವಾಸಿಗಳು ಬುಡಕಟ್ಟು ಜನಾಂಗ ಮತ್ತು ಆದಿಜನಾಂಗದವರನ್ನು ನಾವು ಶೂದ್ರರು ಎಂದು ಕರೆದು ದೇವರಿಂದ ದೂರ ಮಾಡಿದಾಗ ಅವರು ಈ ದೈವಶಕ್ತಿಯ ಅನುಭವದಿಂದ ಆರಾಧನೆ ಮಾಡಲು ಶುರುಮಾಡಿದ್ದರು. ಅಲ್ಲಿಂದ ಬೂತಾರಾಧನೆ ಅವರ ಸಂಪತ್ತಾಗಿತ್ತು. ಅದು ಅವರ ಆರಾಧನಾ ಪದ್ಧತಿಯಾಗಿತ್ತು. ಯಾಕೆಂದರೆ ದೇವರನ್ನು ಮುಟ್ಟುವ ಹಾಗಿಲ್ಲ, ದೇವರ ಪ್ರಸಾದವನ್ನು ಮುಟ್ಟುವ ಹಾಗಿಲ್ಲ, ತೀರ್ಥವನ್ನೂ ಸಹ ಸರಿಯಾಗಿ ಮುಟ್ಟುವ ಹಾಗಿಲ್ಲ ಎಂದಾಗ ನಮಗೆ ಇವೇನೂ ಬೇಕಾಗಿಲ್ಲ, ಭೂತಗಳನ್ನೇ ನಾವು ಪೂಜೆ ಮಾಡುತ್ತೇವೆ ಎಂದು ಹೇಳಿ ಭೂತಾರಾದನೆ ಮಾಡಿದರು''.
''ಈ ಆದಿ ಸಮುದಾಯ ಏನಿತ್ತು ಇವರೇ ತನಗೆ ಇಷ್ಟವಾದ ರೀತಿಯಲ್ಲಿ ಆರಾಧನೆ ಮಾಡಿಕೊಂಡಿದ್ದರು. ಅಡಿಕೆ ಹಾಳೆಯಲ್ಲಿ ಹಂದಿ ಮುಖವಾಡಿ ಹಾಕಿಕೊಂಡು ಆರಾಧನೆ ಮಾಡ್ತಾ ಇದ್ದರು. ಈ ಬುಡಕಟ್ಟು ಜನಾಂಗದವರು ಮಾಡುತ್ತಿದ್ದ ದೈವಾರಾಧನೆಗೆ ರಾಜಾಶ್ರಯ ನೀಡಿದವರು ಅಲುಪ ಅರಸರು. ಆಮೇಲೆ ಭೂತಗಳಿಗೆ ರಾಜನ್ ದೈವಗಳ ಸ್ಥಾನಮಾನ ಅವರು ಕೊಟ್ಟರು" ಎಂದು ಸಂತೋಷ್ ಗುರೂಜಿ ತಮ್ಮ ಅಬಿಪ್ರಾಯ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ನಟ ಚೇತನ್ ಹೇಳಿಕೆ ಏನು? :
''ನಮ್ಮ ಕನ್ನಡದ ಚಲನಚಿತ್ರ 'ಕಾಂತಾರ'ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ವೈದಿಕ ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ಪ್ರದರ್ಶಿಸಬೇಕು'' ಎಂದು ನಟ ಚೇತನ್ ಅಹಿಂಸಾ ಟ್ವೀಟ್ ಮಾಡಿದ್ದರು.
ನಟ ಚೇತನ್ ಹೇಳಿಕೆ ವಿರೋಧಿಸಿ ಹಿಂದುತ್ವ ಸಂಘಟನೆಗಳು ಪೊಲೀಸ್ ದೂರು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿ ಎಂಬ ರಿಷಬ್ ಶೆಟ್ಟಿ ಹೇಳಿಕೆ ಸರಿಯಲ್ಲ: ನಟ ಚೇತನ್
Facts about #Kantara, Listen to this and decide for yourself...
— Hate Detector (@HateDetectors) October 21, 2022
Now, the ones who called @ChetanAhimsa names, might make fun of this seer too...#BhootaKola #Daivaradane #KantaraMovie #KantaraReview #SantoshGuruji #ChetanAhimsa pic.twitter.com/ezCXpSJTNY