''ಮಕ್ಕಳ ಹಕ್ಕುಗಳ ರಕ್ಷಣೆಗೆ ಕಠಿಣ ಕಾನೂನು ರಚಿಸಿ, ಆ ಕಾನೂನಿಗೆ ‘ದಿವ್ಯಾ' ಹೆಸರನ್ನು ಇಡಬೇಕು''
ಬೆಂಗಳೂರು, ಅ. 21: ‘ಮಕ್ಕಳ ರಕ್ಷಣೆಗೆ ಕಾನೂನು ಬದ್ಧವಾಗಿ ರಚಿಸಲಾಗಿರುವ ‘ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ'ಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಅದರ ಕಾರ್ಯಚಟುವಟಿಕೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಬೇಕು. ಅಧ್ಯಕ್ಷರಿಗೆ ಸರಕಾರದ ಕಾರ್ಯದರ್ಶಿಮಟ್ಟದ ಅಧಿಕಾರ ನೀಡಬೇಕು' ಎಂದು ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಅತ್ಯಾಚಾರ ಮತ್ತು ಕೊಲೆಯ ಕುರಿತ ಸತ್ಯ ಶೋಧನಾ ಸಮಿತಿ ಆಗ್ರಹಿಸಿದೆ.
ಶುಕ್ರವಾರ ಸತ್ಯ ಶೋಧನಾ ಸಮಿತಿ ವರದಿಯನ್ನು ಬಿಡುಗಡೆ ಮಾಡಿದ್ದು, ‘ಮಂಡ್ಯಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿ ನಡೆದ ಇನ್ನೂ 10 ವರ್ಷವೂ ಪೂರೈಸದ ದಿವ್ಯಾ ಎಂಬ ಪುಟ್ಟ ಕಂದಮ್ಮನ ಅತ್ಯಾಚಾರ ಮತ್ತು ಕೊಲೆ ನಿಜಕ್ಕೂ ದೇಶದ ತಲೆಯನ್ನು ತಗ್ಗಿಸುವ ಕೆಲಸ. ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಇರುವ ಎಲ್ಲ ಸಂಸ್ಥೆಗಳನ್ನು ಬಲಿಷ್ಟಗೊಳಿಸುವುದು. ಅಲ್ಲದೆ, ಅವುಗಳ ಚಟುವಟಿಕೆಗಳಿಗೆ ಸಾಕಷ್ಟು ಅನುದಾನವನ್ನು ನೀಡುವುದರ ಮೂಲಕ ಮಕ್ಕಳ ರಕ್ಷಣೆಗೆ ಸರಕಾರ ಮುಂದಾಗಬೇಕು.
‘ಆರ್ ಇ ಕಾಯ್ದೆಯಪ್ರಕಾರ ಯಾವುದೇ ಪ್ರವೇಶ ಪರೀಕ್ಷೆಗಳನ್ನಾಗಲಿ 8ನೆ ತರಗತಿವರೆಗೆ ನಡೆಸುವಂತಿಲ್ಲ ಇದನ್ನು ಜಾರಿಗೊಳಿಸಲು ಕಾನೂನು ಕ್ರಮಗಳನ್ನು ಕೈಗೊಳ್ಳುವುದು. ಅನಧಿಕೃತ ಟ್ಯೂಷನ್ ಕೇಂದ್ರಗಳ ಮೇಲೆ ಕಠಿಣ ಕ್ರಮ ಕೈಗೊಂಡು ಇದನ್ನು ಇಲ್ಲಿಯವರೆಗೆ ನಡೆಯಲು ಬಿಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಕನಿಷ್ಟ 10ನೆ ತರಗತಿ ವರೆಗೆ ಯಾವುದೆ ಸಂಸ್ಥೆ ಹಾಗೂ ಮನೆಪಾಠಗಳು ನಡೆಯದಂತೆ ಕ್ರಮಕೈಗೊಳ್ಳಬೇಕು. ಅಧಿಕೃತ ನೊಂದಣಿ ಟ್ಯೂಷನ್ ಕೇಂದ್ರವಾಗಿದ್ದರೂ ಅವುಗಳ ಮೇಲೆ ನಿಗಾವಹಿಸಿ ಮಕ್ಕಳ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳನ್ನು ಕಾಪಾಡಲು ಕಠಿಣ ಕಾನೂನು ರಚಿಸಿ ಈ ಕಾನೂನಿಗೆ ದಿವ್ಯ ಹೆಸರನ್ನು ಇಡಬೇಕು.
‘ಈ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮಕ್ಕಳ ಅಭಿವೃದ್ಧಿಗಿರುವ ಎಲ್ಲ ಇಲಾಖೆಗಳನ್ನು ಒಂದೆಡೆ ಸೇರಿಸಿ ಪೊಲಿಸ್ ಇಲಾಖೆಯನ್ನು ಸೇರಿಸಿದಂತೆ ಸಿಂಗಲ್ ವಿಂಡೋ ವ್ಯವಸ್ಥೆ ಮೂಲಕ ಜಾರಿಗೊಳಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಾಲೆಯಲ್ಲಿಯೇ ಪರಿಹಾರ ಬೋಧನಾ ವ್ಯವಸ್ಥೆಯನ್ನು ಮಾಡಬೇಕು. ಸರಕಾರ ನಡೆಸುವ ಎಲ್ಲ ಶಾಲೆಗಳಲ್ಲಿಯೇ ನವೋದಯ ಶಾಲೆ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಕ್ರಮಕೈಗೊಳ್ಳಬೇಕು.
ಮಕ್ಕಳ ರಕ್ಷಣೆಗೋಸ್ಕರ ಇರುವ ಕಾನೂನುಗಳ ಅರಿವು ಕಾರ್ಯಕ್ರಮಗಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಮುದಾಯಕ್ಕೆ ಹೆಚ್ಚಿನ ಅರಿವನ ಕಾರ್ಯಕ್ರಮಗಳನ್ನು ಅಯೋಜಿಸುವುದು. ಅತ್ಯಾಚಾರಮತ್ತು ಕೊಲೆಗೆ ಒಳಗಾದ ಕುಮಾರಿ ದಿವ್ಯಾಕುಟುಂಬಕ್ಕೆ ಗರಿಷ್ಠಮಟ್ಟದ ಅನುಕಂಪದ ಪರಿಹಾರವನ್ನು ನೀಡಬೇಕು. ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಮಕ್ಕಳ ರಕ್ಷಣೆಗೋಸ್ಕರ ವಿರುವ ಎಲ್ಲ ಸಮಿತಿಗಳನ್ನು ಬಲಿಷ್ಟಗೊಳಿಸುವುದು. ಮಕ್ಕಳ ರಕ್ಷಣೆ ಗೋಸ್ಕರ ಸಾಕಷ್ಟು ಅನುದಾನ ಮೀಸಲಿಡಬೇಕು' ಎಂದು ಸಮಿತಿ ಶಿಫಾರಸ್ಸು ಮಾಡಿದೆ.
ಸತ್ಯ ಶೋಧನಾ ಸಮಿತಿ ಮಾರ್ಗದರ್ಶಕರಾಗಿ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ., ಸಮಿತಿ ಸದಸ್ಯರಾಗಿ ವಿವಿಧ ಸಂಘಟನೆಗಳ ಮುಖಂಡರಾದ ಯೋಗಾನಂದ ಬಿ.ಎನ್., ಲೊಕೇಶ್ ತಾಳಿಕಟ್ಟೆ, ಕುಮಾರಸ್ವಾಮಿ ಟಿ., ಬಾಸ್ಕರ್ ರೆಡ್ಡಿ, ವಾಣಿ, ಮಂಜುಶ್ರೀ ಹಾಗೂ ಅನುಸೂಯಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.