ಹೆಲ್ಮೆಟ್‌ ಧರಿಸದಿದ್ದಕ್ಕೆ ದಂಡ: ಸಾಕ್ಷ್ಯ ಕೇಳಿದ ಯುವಕನಿಗೆ ಖಡಕ್ ಉತ್ತರ ನೀಡಿದ ಬೆಂಗಳೂರು ಟ್ರಾಫಿಕ್‌ ಪೊಲೀಸ್‌

Update: 2022-10-21 14:48 GMT

ಬೆಂಗಳೂರು: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಬೆಂಗಳೂರು ಸಂಚಾರ ಪೊಲೀಸರು ದಂಡ ಕಟ್ಟಲು ಚಲನ್ ನೀಡಿದ್ದರು. ತನ್ನ ತಪ್ಪನ್ನು ಒಪ್ಪಿ ದಂಡ ಕಟ್ಟುವ ಬದಲು, ನಿಯಮ ಉಲ್ಲಂಘಿಸಿದ ʼಸಾಕ್ಷ್ಯ ನೀಡಿʼ ಎಂದು ಚಲನ್‌ ಸ್ವೀಕರಿಸಿದ ವ್ಯಕ್ತಿ ಪೊಲೀಸರಿಗೆ ಸವಾಲು ಹಾಕಿ ಪೇಚಿಗೆ ಸಿಲುಕಿದ್ದಾರೆ. ಇದಾಗಿ, ಕೆಲವೇ ನಿಮಿಷಗಳಲ್ಲಿ ಪೊಲೀಸರು ವ್ಯಕ್ತಿ ಸಂಚಾರಿ ನಿಯಮ ಉಲ್ಲಂಘಿಸಿದ ಫೋಟೋವನ್ನು ಸರಣಿ ಟ್ವೀಟ್‌ ಮೂಲಕವೇ ಬಹಿರಂಗಪಡಿಸಿದ್ದಾರೆ.  

ಬೆಂಗಳೂರಿನ ಫೆಲಿಕ್ಸ್ ರಾಜ್ ಎಂಬುವವರಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ಚಲನ್ ಜಾರಿ ಮಾಡಲಾಗಿದೆ. ದಂಡದ ಬಗ್ಗೆ ಅಸಮಾಧಾನಗೊಂಡ ಅವರು ಪೊಲೀಸರಲ್ಲಿ ಸಾಕ್ಷ್ಯ ಕೇಳಲು ನಿರ್ಧರಿಸಿದರು. ಪೊಲೀಸರು ಆರಂಭದಲ್ಲಿ ಕಳಿಸಿದ್ದ ಫೋಟೋದಲ್ಲಿ ಕೇವಲ ವಾಹನದ ನಂಬರ್‌ ಪ್ಲೇಟ್‌ ಮಾತ್ರ ಇತ್ತು. ಆದರೆ, ಅವರು ಹೆಲ್ಮೆಟ್‌ ಧರಿಸದೆ ಇರುವುದು ಆ ಫೋಟೋದಲ್ಲಿ ಕಾಣಿಸುತ್ತಿರಲಿಲ್ಲ. ಸಾಕ್ಷ್ಯ ಕೇಳಿದ ಬೆನ್ನಿಗೆ ಫೋಟೋದ ಸಂಪೂರ್ಣ ಭಾಗವನ್ನು ಪೊಲೀಸರು ಹಾಕಿದ್ದಾರೆ.

"ಹಲೋ @blrcitytraffic @BlrCityPolice ನಾನು ಹೆಲ್ಮೆಟ್ ಧರಿಸಿಲ್ಲ ಎಂಬುದಕ್ಕೆ ಯಾವುದೇ ಸರಿಯಾದ ಪುರಾವೆಗಳಿಲ್ಲ. ದಯವಿಟ್ಟು ಸರಿಯಾದ ಚಿತ್ರವನ್ನು ಒದಗಿಸಿ ಅಥವಾ ಪ್ರಕರಣವನ್ನು ತೆಗೆದುಹಾಕಿ. ಮೊದಲು ಅದೇ ವಿಷಯ ಸಂಭವಿಸಿದೆ ಆದರೆ ನಾನು ತೆರವುಗೊಳಿಸಲು ದಂಡ ಪಾವತಿಸಿದ್ದೇನೆ. ನಾನು ಮತ್ತೊಮ್ಮೆ ದಂಡವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ." ಎಂದು ರಾಜ್‌ ಟ್ವೀಟ್‌ ಮಾಡಿದ್ದರು. ಪೊಲೀಸರಿಂದ ಪ್ರತಿಕ್ರಿಯೆ ಬಂದ ಬೆನ್ನಿಗೆ ಅವರು ಆ ಟ್ವೀಟನ್ನು ಡಿಲಿಟ್‌ ಮಾಡಿದ್ದಾರೆ ಎಂದು ndtv ವರದಿ ಹೇಳಿದೆ.

  "ಸಾಕ್ಷ್ಯಕ್ಕಾಗಿ ಧನ್ಯವಾದಗಳು. ಪ್ರತಿಯೊಬ್ಬ ಸಾಮಾನ್ಯ ಸಾರ್ವಜನಿಕವಾಗಿ ಇದನ್ನು ಕೇಳುವ ಹಕ್ಕು ಇದೆ. ಈ ಬಗ್ಗೆ ಸ್ಪಷ್ಟಪಡಿಸಿದ್ದಕ್ಕಾಗಿ @blrcitytraffic ಅನ್ನು ನಾನು ಪ್ರಶಂಸಿಸುತ್ತೇನೆ. ನಾನು ದಂಡವನ್ನು ಪಾವತಿಸುತ್ತೇನೆ. “ ಎಂದು ಇನ್ನೊಂದು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News