ಚಳ್ಳಕೆರೆ ಠಾಣೆ ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಚಿತ್ರದುರ್ಗ, ಅ.24: ಚಳ್ಳಕೆರೆ ಠಾಣೆಯ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ಚಿತ್ರದುರ್ಗ ಮಹಿಳಾ ಪೋಲಿಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಉಮೇಶ್ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದೂರುದಾರ ಯುವತಿಗೆ ಉಮೇಶ್ ಸೋದರ ಮಾವನ ಮಗನಾಗನಿದ್ದು, ನಿವೇಶನದ ಸಮಸ್ಯೆಯ ಹಿನ್ನೆಲೆಯಲ್ಲಿ ಸಹಾಯ ಮಾಡುವ ನೆಪದಲ್ಲಿ ಐದು ವರ್ಷಗಳಿಂದ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾಳೆ.
ಘಟನೆ ವಿವರ: ಜಿ.ಬಿ.ಉಮೇಶ್ ಐದು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಠಾಣೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದರು. ಆ ವೇಳೆ ನಿವೇಶನದ ಸಮಸ್ಯೆ ಬಗ್ಗೆ ಯುವತಿಯು ಉಮೇಶ್ ಅವರಲ್ಲಿ ಸಹಾಯ ಯಾಚಿಸಿದ್ದಳು. ಅದರಂತೆ ಸಹಾಯ ಮಾಡುವ ನೆಪದಲ್ಲಿ ಉಮೇಶ್ ಅತ್ಯಾಚಾರ ಎಸಗಿದ್ದಾನೆ. ಇದಲ್ಲದೆ ಉಮೇಶ್ ಬೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಐದು ಸಲ ಯುವತಿಗೆ ಗರ್ಭಪಾತ ಮಾಡಿಸಿರುವ ಆರೋಪ ಕೇಳಿಬಂದಿದೆ.
ಉಮೇಶ್ ಗೆ ಈಗಾಗಲೇ ಇಬ್ಬರು ಪತ್ನಿಯರಿದ್ದು, ನನ್ನನ್ನು ಮೂರನೆಯವಳಾಗಿರು ಎಂದು ಹೇಳಿಕೊಂಡಿದ್ದ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಒಂದು ವೇಳೆ ತಾನು ಹೇಳಿದ ಹಾಗೆ ಕೇಳದೆ ಇದ್ದಲ್ಲಿ ನಿಮ್ಮ ನಿವೇಶನ ನಿಮಗೆ ಸಿಗದ ಹಾಗೆ ಮಾಡುತ್ತೇನೆ, ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆ ಕುರಿತು ಸಿಪಿಐ ಉಮೇಶ್ ವಿರುದ್ಧ ಕಲಂ 376 ಕ್ಲಾಸ್ (2)(K)(N), 323, 504, 506 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಸಿಪಿಐ ಉಮೇಶ್ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.