ನಮ್ಮ ಸಿನೆಮಾಗಳು ಧರ್ಮಾಂಧ ರಾಜಕಾರಣದ ದಾಳಗಳಾಗುವುದು ಬೇಡ: ನಟ ಕಿಶೋರ್
ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಸಿನೆಮಾದ ಸುತ್ತ ಸೃಷ್ಟಿಯಾಗಿರುವ ವಿವಾದದ ಕುರಿತು ಪ್ರತಿಕ್ರಿಯಿಸಿರುವ ನಟ ಕಿಶೋರ್ ಕುಮಾರ್, ನಮ್ಮ ಸಿನೆಮಾಗಳು ನಮ್ಮ ಹೆಮ್ಮೆ. ಅವುಗಳು ಧರ್ಮಾಂಧ ರಾಜಕಾರಣದ ದಾಳಗಳಾಗುವುದು ಬೇಡ ಎಂದು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಾಕಿರುವ 'ಕಾಂತಾರ' ಸಿನೆಮಾದ ಪ್ರಮುಖ ನಟರಲ್ಲಿ ಒಬ್ಬರಾಗಿರುವ ಕಿಶೋರ್ ಕುಮಾರ್, ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ ಕಳಕಳಿಯ ಮನವಿ . ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಶ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಶ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.
ಎಲ್ಲ ಒಳ್ಳೆಯ ಸಿನೆಮಾಗಳಂತೆ 'ಕಾಂತಾರ' ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನೋರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನೆಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿ ಹೋದೀತು ಎಂದು ಎಚ್ಚರಿಸಿದ್ದಾರೆ.
ಕೇವಲ ಓಟಿಗಾಗಿ ಪಟೇಲ್, ಗಾಂಧಿ, ಬೋಸ್, ನೆಹರೂ ಸಹಿತ ಕೋಟಿ ಕೋಟಿ ಸ್ವಾತಂತ್ರ್ಯ ಹೋರಾಟಗಾರರನ್ನೂ ಬಳಸುವ, ಬೈಯ್ಯುವ.. ರಾಷ್ಟ್ರ ಗೀತೆ, ಧ್ವಜ, ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿದ ದ್ವೇಷದ ದಲ್ಲಾಳಿಗಳು ಸಿನೆಮಾಗಳನ್ನೂ ಕಬಳಿಸುವ ಮುನ್ನ ಒಂದು ಕ್ಷಣ ಯೋಚಿಸಿ ಎಂದು ಹೇಳಿರುವ ಕಿಶೋರ್, ನಮ್ಮ ಸಿನೆಮಾಗಳು ನಮ್ಮ ಹೆಮ್ಮೆ. ಅವುಗಳನ್ನು ಧರ್ಮಾಂಧ ರಾಜಕಾರಣದ ದಾಳಗಳಾಗುವುದು ಬೇಡ ಎಂದು ಮನವಿ ಮಾಡಿದ್ದಾರೆ.