ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ; ಮುಂದಿನ ಅಧಿವೇಶನದಲ್ಲಿ ಅನುಮೋದನೆ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ, ಅ.24: ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳಿಗೆ ಮೀಸಲಾತಿ ಹೆಚ್ಚಳಕ್ಕೆ ಅಧ್ಯಾದೇಶ ಹೊರಡಿಸಲು ರಾಜ್ಯಪಾಲರು ಅಂಕಿತ ಹಾಕಿದ್ದು, ಈ ಸುಗ್ರೀವಾಜ್ಞೆಗೆ ಮುಂದಿನ ಅಧಿವೇಶನದಲ್ಲಿ ಎರಡೂ ಸದನಗಳ ಅನುಮೋದನೆಯನ್ನು ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಈ ವರ್ಗಗಳಿಗೆ ಕಾನೂನಿನ ರಕ್ಷಣೆಯನ್ನು ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಆಯೋಗಗಳ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಯಾವುದೇ ವರ್ಗದ ಮೀಸಲಾತಿ ತೆಗೆಯುವುದಾಗಲಿ, ಸೇರ್ಪಡೆ ಮಾಡುವುದರ ಬಗ್ಗೆಯಾಗಲೀ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಏಕೆಂದರೆ ಏನೇ ಮಾಡಿದರೂ ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಲ್ಲಿಯೇ ಮಾಡಬೇಕು. ಮೀಸಲಾತಿ ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದ್ದು, ಸರ್ಕಾರದ ಮುಖ್ಯಸ್ಥನಾಗಿ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಮುಂದುವರಿಯಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.