ಗೌರಿ ಲಂಕೇಶ್ ಹತ್ಯೆ ಪ್ರಕರಣ; ಆರೋಪಿಗೆ ಡೀಫಾಲ್ಟ್ ಜಾಮೀನು ನೀಡಲು ಹೈಕೋರ್ಟ್ ನಕಾರ

Update: 2022-10-24 12:54 GMT
ಗೌರಿ ಲಂಕೇಶ್

ಬೆಂಗಳೂರು, ಅ.24: ಪತ್ರಕರ್ತೆ ಗೌರಿ ಲಂಕೇಶ್ (Gauri Lankesh) ಹತ್ಯೆ ಪ್ರಕರಣದ ಆರೋಪಿ ಹೃಷಿಕೇಶ್ ಡೇವಿಡ್ಕರ್ ಗೆ ಡೀಫಾಲ್ಟ್ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. 

ಮಹಾರಾಷ್ಟ್ರ ಮೂಲದ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ. 

ವಿಚಾರಣೆ ವೇಳೆ, ಅರ್ಜಿದಾರ ಹೃಷಿಕೇಶ್ ಡೇವಿಡ್ಕರ್‍ರನ್ನು ಬಂಧಿಸಿ 90 ದಿನಗಳು ಕಳೆದಿದೆ. ಈವರೆಗೂ ಆರೋಪಿ ವಿರುದ್ಧ ಆರೋಪ ಪಟ್ಟಸಲ್ಲಿಸಿಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ವಕೀಲರು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರಕಾರದ ಪರ ವಕೀಲರು ವಾದ ಮಂಡಿಸಿ, ಘಟನೆ ಬಳಿಕ ಅರ್ಜಿದಾರರು ತಲೆಮರೆಸಿಕೊಂಡಿದ್ದರು. ಆರೋಪಿಯ ಬಂಧನಕ್ಕೂ ಮುನ್ನವೇ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. 

ಈ ಹಿನ್ನೆಲೆಯಲ್ಲಿ ಡೀಫಾಲ್ಟ್ ಜಾಮೀನು ನೀಡುವುದಕ್ಕೆ ಅವಕಾಶವಿಲ್ಲಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ ಜಾಮೀನು ನಿರಾಕರಿಸಿದ್ದು, ಅರ್ಜಿ ವಜಾಗೊಳಿಸಿದೆ.

ಪ್ರಕರಣವೇನು?: ಅರ್ಜಿದಾರರಾದ ಹೃಷಿಕೇಶ್ ಅವರು ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ 18ನೆ ಆರೋಪಿಯಾಗಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಜೊತೆಗೆ, ಕೋಕಾ ಕಾಯಿದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಿದ್ದರು.

ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಆರೋಪಿ ತನ್ನನ್ನು 2020ರ ಜನವರಿಯಲ್ಲಿ ಬಂಧಿಸಿದ್ದು, ಈಗಾಗಲೇ 90 ದಿನ ಕಳೆದಿದ್ದು, ಡೀಫಾಲ್ಟ್ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News