ಭ್ರಷ್ಟಾಚಾರವನ್ನು ‘ಹಲಾಲ್’ ಮಾಡಿಕೊಂಡಿರುವ ಬಿಜೆಪಿ: ಅಸದುದ್ದೀನ್ ಉವೈಸಿ

Update: 2022-10-25 17:03 GMT

ಬೆಂಗಳೂರು, ಅ.25: ‘ರಾಜ್ಯದಲ್ಲಿ ಹಲಾಲ್ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸರಕಾರ ತನ್ನ ಭ್ರಷ್ಟಾಚಾರವನ್ನು ‘ಹಲಾಲ್’(ಸ್ವೀಕಾರ್ಹ) ಮಾಡಿಕೊಂಡಿದೆ. ಇವರು ತೆಗೆದುಕೊಳ್ಳೂವ ಕಮಿಷನ್ ಹಲಾಲ್, ನಾವು ಸೇವಿಸುವ ಮಾಂಸ ಮಾತ್ರ ನಿಷಿದ್ಧ' ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೇಹಾದುಲ್ ಮುಸ್ಲಿಮೀನ್(ಎಐಎಂಐಎಂ) ಅಧ್ಯಕ್ಷ ಅಸದುದ್ದೀನ್ ಉವೈಸಿ (Asaduddin Owaisi) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಬಿಜಾಪುರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಎಐಎಂಐಎಂ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರ ಭ್ರಷ್ಟಚಾರ, ಕಮಿಷನ್ ವಿಚಾರಕ್ಕೆ ಸಂಬಂಧಿಸಿದಂತೆ ಒಬ್ಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇವರ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವೀಡಿಯೊಗಳು ಇವೆ. ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಇಲ್ಲಿನ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗಳೆ ಸಾಕ್ಷಿ ಎಂದು ಹೇಳಿದರು. 

ಬಿಜೆಪಿ ಮುಸ್ಲಿಮರ ಗುರುತಿನ ವಿರೋಧಿಯಾಗಿದೆ. ಆದುದರಿಂದ, ಯಾವಾಗಲೂ ಅವರಿಗೆ ಗಡ್ಡ, ಟೋಪಿ, ನಮ್ಮ ಊಟದ ಬಗ್ಗೆಯೆ ಚಿಂತೆ. ಆದರೆ, ಪ್ರಧಾನಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂದು ಕೇವಲ ಬಾಯಿ ಮಾತುಗಳನ್ನಾಡುತ್ತಾರೆ ಎಂದು ಅಸದುದ್ದೀನ್ ಉವೈಸಿ ಕಿಡಿಗಾರಿದರು.

ಹಿಜಾಬ್ ಧರಿಸುವ ಮಹಿಳೆ ಪ್ರಧಾನಿಯಾಗಲಿ: ಮುಸ್ಲಿಮರಿಗೆ ನೀಡುತ್ತಿರುವ ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ಇಲ್ಲಿನ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸುತ್ತಿದ್ದಾರೆ. ಜಾತ್ಯತೀತ, ಬಹುಸಂಸ್ಕøತಿ, ಸಮಾನ ಅವಕಾಶಗಳನ್ನು ಅಂತ್ಯಗೊಳಿಸುವುದೆ ಬಿಜೆಪಿ ಉದ್ದೇಶ. ನನ್ನ ಜೀವಿತಾವಧಿಯಲ್ಲಿ ಅಥವಾ ನಂತರದ ದಿನಗಳಲ್ಲಿ ಹಿಜಾಬ್ ಧರಿಸುವ ಮಹಿಳೆಯೊಬ್ಬರು ದೇಶದ ಪ್ರಧಾನಿಯಾಗಲಿ ಎಂಬುದು ನನ್ನ ಕನಸು ಎಂದು ಅಸುದ್ದೀನ್ ಉವೈಸಿ ಹೇಳಿದರು.

ಸರಕಾರಿ ಶಾಲೆಗಳ ಸಮೀಕ್ಷೆ ಮಾಡಿ: ರಾಜ್ಯ ಸರಕಾರವು ಒಂದು ಸಮುದಾಯದ ಶಿಕ್ಷಣ ಸಂಸ್ಥೆಗಳ ಸಮೀಕ್ಷೆ ಮಾಡುವ ಬದಲು, ಸರಕಾರಿ ಶಾಲೆ, ಹೆಣ್ಣು ಮಕ್ಕಳ ಶಾಲೆಗಳ ಸಮೀಕ್ಷೆ ಮಾಡಿ, ಎಷ್ಟು ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಇದೆ ಎಂಬುದು ತಿಳಿದುಕೊಳ್ಳಲಿ. ಬಿಜೆಪಿಯವರು ದ್ವೇಷ ಹರಡುವುದನ್ನು ನಿಲ್ಲಿಸಿ, ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಆಲೋಚನೆ ಮಾಡಲಿ ಎಂದು ಅವರು ಹೇಳಿದರು.

ಚೀನಾಗೆ ಪ್ರಧಾನಿ ಎಚ್ಚರ ನೀಡಬೇಕಿತ್ತು: ಪ್ರಧಾನಿ ನರೇಂದ್ರ ಮೋದಿ ಯೋಧರಿಗೆ ದೀಪಾವಳಿ ಆಚರಿಸಲು ನಿನ್ನೆ ಕಾರ್ಗಿಲ್‍ಗೆ ಹೋಗಿದ್ದರು. ನೆರೆಯ ದೇಶ ಚೀನಾ ನಮ್ಮ ನೆಲದಲ್ಲಿ ಬಂದು ಕೂತಿದೆ. ಚೀನಾ ಸುಮಾರು 10 ಕಿ.ಮೀ. ನಮ್ಮ ಭೂ ಪ್ರದೇಶದ ಒಳಗೆ ಬಂದಿರುವುದರಿಂದ ನಾವು ಐದು ಗ್ರಾಮಗಳನ್ನು ಕಳೆದುಕೊಂಡಿದ್ದೇವೆ. ಈ ಬಗ್ಗೆ ನಿನ್ನೆ ಪ್ರಧಾನಿ, ಚೀನಾಗೆ ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಸದುದ್ದೀನ್ ಉವೈಸಿ ತಿಳಿಸಿದರು.

ಇದನ್ನೂ ಓದಿ: ಶಾಸಕ ಯತ್ನಾಳ್​ಗೆ​ ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿ: ಅಸದುದ್ದೀನ್ ಉವೈಸಿ ವಾಗ್ದಾಳಿ

ನನ್ನ ಅನುಮತಿ ಪಡೆದು ಬಿಜೆಪಿಗೆ ಹೋದ್ರಾ?: ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಗೆ ಅವರ ಪಕ್ಷ ಹಾಗೂ ನಾಯಕತ್ವ ಕಾರಣ. ನಮ್ಮನ್ನು ಬಿಜೆಪಿಯ ‘ಬಿ’ ಟೀಂ ಎನ್ನುತ್ತಾರೆ. ಕರ್ನಾಟಕ, ಗುಜರಾತ್, ಗೋವಾ ಸೇರಿದಂತೆ ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿಗೆ ಹೋಗುವ ಮುನ್ನ ನನ್ನ ಅನುಮತಿ ಕೇಳಿದ್ರಾ? ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲಲು ನಾನು ಕಾರಣನಾ? ಮಹಾರಾಷ್ಟ್ರದಲ್ಲಿ ಶಿವಸೇನಾ ಜೊತೆ ಮೈತಿ ಮಾಡಿಕೊಂಡರು. ಕಾಂಗ್ರೆಸ್ ಪಕ್ಷದ ಇಂತಹ ಅವಕಾಶ ರಾಜಕಾರಣದಿಂದಾಗಿಯೆ ಮೋದಿ ಎರಡು ಬಾರಿ ಪ್ರಧಾನಿ ಆದದ್ದು ಎಂದು ಅವರು ಟೀಕಿಸಿರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News