ನಿಯಮ ಪಾಲಿಸದ ಅರೇಬಿಕ್ ಶಾಲೆಗಳ ವಿರುದ್ಧ ಕ್ರಮ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಮಡಿಕೇರಿ ಅ.27 : ರಾಜ್ಯದಲ್ಲಿನ ಹಲವು ಅರೇಬಿಕ್ ಶಾಲೆಗಳು ಶಿಕ್ಷಣ ಇಲಾಖೆಯ ನಿಯಮ ಪಾಲಿಸದೆ, ಪ್ರಮುಖ ವಿಷಯಗಳನ್ನೇ ಬೋಧಿಸದೆ ಇರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸಮಗ್ರ ಮಾಹಿತಿ ಕಲೆ ಹಾಕಿ ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ರಾಜ್ಯದಲ್ಲಿ 200 ಅರೇಬಿಕ್ ಶಾಲೆಗಳಿದ್ದು, ಈ ಪೈಕಿ 108 ಅನುದಾನಿತ ಶಾಲೆಗಳು ಮತ್ತು 80ಕ್ಕೂ ಅಧಿಕ ಅನುದಾನ ರಹಿತ ಶಾಲೆಗಳಿವೆ. ಶಿಕ್ಷಣ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಈ ಎಲ್ಲಾ ಶಾಲೆಗಳು ರಾಜ್ಯ ಶಿಕ್ಷಣ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗಿದೆ ಎಂದರು.
ಬಹುತೇಕ ಶಾಲೆಗಳು ಶಿಕ್ಷಣ ಇಲಾಖೆಯ ನಿಯಮ ಪಾಲಿಸುತ್ತಿಲ್ಲ, ವಿಜ್ಞಾನದಂತಹ ಪ್ರಮುಖ ವಿಷಯಗಳನ್ನೇ ಬೋಧಿಸುತ್ತಿಲ್ಲ. ಇದರಿಂದಾಗಿ ಅರಬ್ಬಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಡಕಾಗಿದೆ ಎಂಬ ದೂರುಗಳೂ ಕೇಳಿ ಬಂದಿದೆ. ರಾಜ್ಯದಲ್ಲಿನ ಅರೇಬಿಕ್ ಶಾಲೆಗಳ ಸಮೀಕ್ಷೆ ಮಾಡಲಾಗುತ್ತಿದೆ, ಸಮಗ್ರ ಮಾಹಿತಿ ಕಲೆ ಹಾಕಿದ ಬಳಿಕ ಶಿಕ್ಷಣ ಇಲಾಖೆಯ ನಿಯಮ ಪಾಲಿಸದ ಸೂಕ್ತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ನಾಗೇಶ್ ಹೇಳಿದರು.
ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತಿತತರು ಹಾಜರಿದ್ದರು.