ಟಿ-ಟ್ವೆಂಟಿ ವಿಶ್ವಕಪ್ ಕ್ರಿಕೆಟ್: ಪಾಕಿಸ್ತಾನ ತಂಡವನ್ನು 1 ರನ್ ನಿಂದ ಸೋಲಿಸಿದ ಝಿಂಬಾಬ್ವೆ
Update: 2022-10-27 15:54 GMT
ಪರ್ತ್: ಆಸ್ಟ್ರೇಲಿಯಾದ ಪರ್ತ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ಝಿಂಬಾಬ್ವೆ ತಂಡಗಳ ನಡುವಿನ ವಿಶ್ವಕಪ್ ಟಿ-ಟ್ವೆಂಟಿ ಸರಣಿಯ 24ನೇ ಪಂದ್ಯಾಟದಲ್ಲಿ ಝಿಂಬಾಬ್ವೆ ಒಂದು ರನ್ ಗಳ ರೋಚಕ ಜಯ ಸಾಧಿಸಿದೆ. ಝಿಂಬಾಬ್ವೆ ನೀಡಿದ್ದ 130 ರನ್ ಗಳ ಗುರಿಯನ್ನು ತಲುಪಲು ಸಾಧ್ಯವಾಗದೇ ಪಾಕಿಸ್ತಾನ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿ ಪಂದ್ಯವನ್ನು ಕೈಚೆಲ್ಲಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಝಿಂಬಾಬ್ವೆ ತಂಡದ ಪರ ಸೀನ್ ವಿಲಿಯಮ್ಸ್ 31 ರನ್ ಗಳಿಸಿದರು. ಬೌಲಿಂಗ್ ನಲ್ಲಿ ಪಾಕಿಸ್ತಾನ ಪರ ಮುಹಮ್ಮದ್ ವಸೀಂ 4 ವಿಕೆಟ್ ಗಳಿಸಿದರೆ, ಶದಾಬ್ ಖಾನ್ 3 ವಿಕೆಟ್ ಪಡೆದು ಮಿಂಚಿದರು. ಬಳಿಕ ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ತಂಡದ ಪರ ಶಾನ್ ಮಸೂದ್ 44 ರನ್ ಗಳಿಸಿದರು. ಬೌಲಿಂಗ್ ನಲ್ಲಿ ಸಿಕಂದರ್ ರಝಾ 3 ವಿಕೆಟ್ ಪಡೆದು ಮಿಂಚಿದರು.
ಕೊನೆಯ ಎಸೆತದಲ್ಲಿ ಮೂರು ರನ್ ಗಳ ಅಗತ್ಯವಿದ್ದಾಗ ಶಹೀನ್ ಅಫ್ರಿದಿ ರನೌಟ್ ಗೆ ಬಲಿಯಾದರು.