ಆನೆ ದಂತ ಮಾರಾಟಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

Update: 2022-10-28 12:52 GMT

ಮಡಿಕೇರಿ ಅ.28 : ಆನೆಯ ದವಡೆ ಹಲ್ಲುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ಅರಣ್ಯ ಸಂಚಾರಿ ದಳ ಬಂಧಿಸಿದೆ. ಬಂಧಿತ ಆರೋಪಿಗಳಿಂದ 20 ಕೆ.ಜಿ ತೂಕದ ಆನೆಯ 3 ದವಡೆ ಹಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ.

ಪೊನ್ನಂಪೇಟೆ ತಾಲೂಕಿನ ಮೇಕೂರು ಹೊಸ್ಕೆರೆ ಗ್ರಾಮ ವ್ಯಾಪ್ತಿಯಲ್ಲಿ ಒಟ್ಟು 4 ಮಂದಿ ಆನೆಯ ದವಡೆ ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದು ಅರಣ್ಯ ಸಂಚಾರಿ ದಳಕ್ಕೆ ಮಾಹಿತಿ ಲಭಿಸಿತ್ತು. ಈ ಮಾಹಿತಿಯನ್ನು ಆಧರಿಸಿ ಮಡಿಕೇರಿ ಅರಣ್ಯ ಸಂಚಾರಿ ದಳದ ಉಪ ಸಂರಕ್ಷಣಾ ಅಧಕಾರಿ ಶಿವರಾಮ್ ಬಾಬು ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. 

ತಿತಿಮತಿ-ಪಾಲಿಬೆಟ್ಟ ರಸ್ತೆಯ ಪಕ್ಕದಲ್ಲಿರುವ ನಿರ್ಜನ ಪ್ರದೇಶದಲ್ಲಿ ಆನೆ ದವಡೆ ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಇಬ್ಬರು ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಮತ್ತಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ನಾಯಕ್, ವಲಯ ಅರಣ್ಯಾಧಿಕಾರಿ ಮಂಜುನಾಥ್ ದೂಳೆ, ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್, ಪಿ.ಗಣಪತಿ, ಜಿ.ವಿಕ್ರಮ, ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪ್ರಕಾಶ್ ಅವರುಗಳು ಕಾರ್ಯಾಚರಣೆ ನಡೆಸಿದ್ದಾರೆ. 

Similar News