ಮಂಗಳೂರು: ಸರಕು ಸಾಗಾಟದ ಮೂರು ಸಣ್ಣ ಹಡಗುಗಳು ಬೆಂಕಿಗೆ ಆಹುತಿ
► ಮನೆ ಹಾಗೂ ಶೆಡ್‌ಗೂ ಹಾನಿ ►ಕೋಟ್ಯಂತರ ರೂ. ನಷ್ಟ
ಮಂಗಳೂರು, ಅ.28: ನಗರ ಹೊರವಲಯದ ಕಸಬಾ ಬೆಂಗರೆಯ ನದಿ ಕಿನಾರೆಯಲ್ಲಿ ಲಂಗರು ಹಾಕಲಾಗಿದ್ದ ಸರಕು ಸಾಗಾಟದ ಮೂರು ಸಣ್ಣ ಹಡಗುಗಳು ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಈ ಸಂದರ್ಭ ಒಂದು ಮನೆ ಮತ್ತು ಒಂದು ಶೆಡ್‌ಗೂ ಹಾನಿಯಾಗಿದ್ದು, ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಘಟನೆಯ ವಿವರ: ಲಕ್ಷದ್ವೀಪದ ನಿವಾಸಿಗಳಿಗೆ ಸೇರಿದ್ದನ್ನೆಲಾದ ಅಲ್ ಮದಾತ್, ಅಲ್ ಜಝೀರಾ, ನಜಾತ್ ಎಂಬ ಹೆಸರಿನ ಸರಕು ಸಾಗಾಟದ ಸಣ್ಣ ಹಡಗುಗಳು ಕಸಬಾ ಬೆಂಗರೆಯ ನದಿ ಕಿನಾರೆಯಲ್ಲಿ ಲಂಗರು ಹಾಕಲಾಗಿತ್ತು. ಶುಕ್ರವಾರ ಸಂಜೆ ಸುಮಾರು 4.30ರ ವೇಳೆಗೆ ಒಂದು ಸಣ್ಣ ಹಡಗಿನಲ್ಲಿ ಬೆಂಕಿ ಅನಾಹುತ ಸಂಭವಿಸಿತು. ತಕ್ಷಣ ಸ್ಥಳೀಯರು ಜಮಾಯಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ ಪಕ್ಕದಲ್ಲೇ ಇದ್ದ ಇತರ ಎರಡು ಸಣ್ಣ ಹಡಗಿಗಳಿಗೂ ಬೆಂಕಿ ತಗಲಿದೆ. ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗವು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಮೂರು ಹಡಗುಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೆ ಪಕ್ಕದ ಒಂದು ಮನೆ ಮತ್ತು ಒಣಮೀನು ದಾಸ್ತಾನಿಡುವ ಶೆಡ್‌ಗೂ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಬೆಂಕಿ ದುರಂತದ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗವು ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಆರಂಭಿಸಿತು. ಆದರೆ ಬಾಣೆತ್ತರಕ್ಕೆ ಕಾಣಿಸಿಕೊಂಡ ಬೆಂಕಿಯ ಜ್ವಾಲೆ, ದಟ್ಟ ಹೊಗೆಯು ಅಗ್ನಿಶಾಮಕ ದಳಕ್ಕೆ ಸವಾಲೊಡ್ಡುವಂತಿತ್ತು. ಮುಸ್ಸಂಜೆಯ ತಂಗಾಳಿಗೆ ಬೆಂಕಿಯ ಕಿಡಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲವೆಂಬಂತೆ ಬೆಂಕಿಯ ತೀವ್ರತೆ ಹೆಚ್ಚಾಯಿತು. ಅಗ್ನಿಶಾಮಕ ದಳದ ಜೊತೆ ಸ್ಥಳೀಯರೂ ಪಂಪ್ ಮೂಲಕ ನದಿ ನೀರನ್ನು ಹಾಯಿಸಿ ಬೆಂಕಿ ನಂದಿಸಲು ಕೈ ಜೋಡಿಸಿದರು. ಸುಮಾರು 4.45ಕ್ಕೆ ಆರಂಭಗೊಂಡ ಕಾರ್ಯಾಚರಣೆಯು ರಾತ್ರಿಯವರೆಗೂ ಮುಂದುವರಿದಿತ್ತು.
ಈ ಸಣ್ಣ ಹಡಗುಗಳು ಹಳೆ ಬಂದರ್‌ನಿಂದ ಲಕ್ಷದ್ವೀಪಕ್ಕೆ ಜಲ್ಲಿ, ಕಲ್ಲು, ಸಿಮೆಂಟ್, ಕಬ್ಬಿಣ ಹಾಗೂ ಆಹಾರ ಸಾಮಗ್ರಿಗಳನ್ನು ಸಾಗಿಸುತ್ತಿವೆ. ಆದರೆ ಕಳೆದ ಎರಡ್ಮೂರು ವರ್ಷದಿಂದ ಇದು ಇಲ್ಲೇ ಲಂಗರು ಹಾಕಿದ್ದು, ದುರಸ್ತಿ ಕಾರ್ಯ ನಡೆಯುತ್ತಿತ್ತು. ದೀಪಾವಳಿ ಕಾರಣ ದುರಸ್ತಿ ಮಾಡುತ್ತಿದ್ದ ಕೆಲಸಗಾರರು ಊರಿಗೆ ಹೋಗಿದ್ದಾರೆ. ದುರಸ್ತಿಗಾಗಿ ತಂದಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಕೂಡ ಇದೀಗ ಬೆಂಕಿಗೆ ಆಹುತಿಯಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
"ಆಕಸ್ಮಿಕ ಬೆಂಕಿಯಿಂದಾಗಿ ಸರಕು ಸಾಗಾಟದ ಮೂರು ಹಡಗುಗಳು ಸಂಪೂರ್ಣವಾಗಿ ಸುಟ್ಟು ಕರಗಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಹಡಗಿನ ಮಾಲಕರಿಗೂ ಮಾಹಿತಿ ನೀಡಲಾಗಿದೆ. ಘಟನೆಯಿಂದ ಯಾರಿಗೂ ಗಾಯ-ಅಪಾಯವಾಗಿಲ್ಲ. ಆದರೆ ಪಕ್ಕದ ಒಂದು ಮನೆ ಮತ್ತು ಒಣಮೀನು ದಾಸ್ತಾನಿಡುವ ಶೆಡ್‌ಗೆ ಹಾನಿಯಾಗಿದೆ. ಈ ಹಿಂದೆಯೂ ಎರಡ್ಮೂರು ಬಾರಿ ಇದೇ ಪರಿಸರದಲ್ಲಿ ಲಂಗರು ಹಾಕಲಾಗಿದ್ದ ಬೋಟ್‌ಗಳಿಗೆ ಆಕಸ್ಮಿಕ ಬೆಂಕಿಯಿಂದ ಹಾನಿಯಾಗಿತ್ತು. ಆದರೆ ಇಂದಿನ ದುರ್ಘಟನೆಯು ಕೆಲಕಾಲ ಆತಂಕ ಸೃಷ್ಟಿಸಿತು. ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳ, ಎಂಆರ್‌ಪಿಎಲ್, ಎನ್‌ಎಂಪಿಟಿ, ಪೊಲೀಸ್ ಇಲಾಖೆಯಲ್ಲದೆ ಸ್ಥಳೀಯರು ತುಂಬಾ ಸಹಕರಿಸಿದ್ದಾರೆ. ಸರಕಾರ ಹಾನಿಗೀಡಾದ ಹಡಗುಗಳು, ಮನೆ, ಶೆಡ್‌ನ ಮಾಲಕರಿಗೆ ಪರಿಹಾರ ಕಲ್ಪಿಸಬೇಕು".
-ಮುನೀಬ್ ಬೆಂಗರೆ, ಸ್ಥಳೀಯ ಕಾರ್ಪೊರೇಟರ್
"ಘಟನೆ ನಡೆದ ತಕ್ಷಣ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಮುಹಮ್ಮದ್ ರಫೀಕ್ ಎಂಬವರ ಮನೆಯೊಳಗಿದ್ದ ಸಾಮಗ್ರಿ ಹಾಗೂ ಅಬ್ದುಲ್ ಸಮದ್ ಎಂಬವರ ಶೆಡ್‌ನೊಳಗಿದ್ದ ಒಣಮೀನುಗಳನ್ನು ಹೊರಗೆ ಸಾಗಿಸಲಾಯಿತು. ಈ ಹಿಂದೆಯೂ ಇದೇ ಸ್ಥಳದಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಆದರೆ ಈ ಬಾರಿಯ ದುರಂತವು ತೀವ್ರತೆಯಿಂದ ಕೂಡಿತ್ತು".
- ಬಿಲಾಲ್ ಮೊಯ್ದಿನ್, ಸ್ಥಳೀಯ ಮಸೀದಿಯ ಅಧ್ಯಕ್ಷರು
"ಹಲವು ವರ್ಷದಿಂದ ನಾನಿಲ್ಲಿ ಮನೆ ಮಾಡಿಕೊಂಡಿರುವೆ. ಘಟನೆ ನಡೆದಾಗ ನಾನು ಮತ್ತು ಪತ್ನಿ ಮನೆಯೊಳಗಿದ್ದೆವು. ಬೆಂಕಿಯ ಕಿಡಿ, ಜ್ವಾಲೆಯು ಮನೆಯನ್ನು ಆವರಿಸುವ ಮುನ್ನವೇ ಎಚ್ಚೆತ್ತುಕೊಂಡು ಸ್ಥಳೀಯರ ಸಹಕಾರದಿಂದ ಮನೆಯೊಳಗಿದ್ದ ಎಲ್ಲಾ ಸಾಮಗ್ರಿಗಳನ್ನು ಹೊರಗೆ ಸಾಗಿಸಿದೆವು. ಆದರೆ, ಮನೆಗೆ ಭಾಗಶಃ ಹಾನಿಯಾಗಿದೆ. ಅಪಾರ ನಷ್ಟವಾಗಿದೆ".
-ಮುಹಮ್ಮದ್ ರಫೀಕ್ , ಹಾನಿಗೀಡಾದ ಮನೆಯ ಯಜಮಾನ
"ಸುಮಾರು 20 ವರ್ಷಗಳಿಂದ ಇಲ್ಲಿ ಶೆಡ್ ನಿರ್ಮಿಸಿ ಒಣಮೀನು ದಾಸ್ತಾನಿಡುತ್ತಿದ್ದೆ. ಹಲವು ಮಂದಿ ಇಲ್ಲಿ ಕೆಲಸಕ್ಕಿದ್ದರು. ಇಂದಿನ ಈ ದುರ್ಘಟನೆಯಲ್ಲಿ ಅಪಾರ ನಷ್ಟವಾಗಿದೆ. ಅಲ್ಲದೆ ಅವರಿಗೂ ಸದ್ಯ ಕೆಲಸ ಇಲ್ಲವಾಗಿದೆ. ಸರಕಾರ ನಷ್ಟ ಪರಿಹಾರ ನೀಡಿ ಸಹಕರಿಸಬೇಕಿದೆ".
- ಅಬ್ದುಲ್ ಸಮದ್, ಒಣಮೀನು ವ್ಯಾಪಾರಿ