ಶಿವಮೊಗ್ಗದಲ್ಲಿ ಗಲಾಟೆ ಮಾಡ್ಸೋದೇ ಈಶ್ವರಪ್ಪ: ಸಿದ್ದರಾಮಯ್ಯ ಆರೋಪ
ಶಿವಮೊಗ್ಗ: 'ಈಶ್ವರಪ್ಪ ಅವರು ಸಚಿವರಾದ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಹೆಣದ ಮೇಲೆ ರಾಜಕಾರಣ ಮಾಡಿದ್ದರು' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ' ಶಿವಮೊಗ್ಗದಲ್ಲಿ ಈಶ್ವರಪ್ಪ ಅವರೇ ಗಲಾಟೆ ಮಾಡಿಸಿದ್ದಾರೆ. 144 ಸೆಕ್ಷನ್ ನಡುವೆ ಹರ್ಷನ ಶವಯಾತ್ರೆ ಮಾಡಿದ್ದರು. ಇಂಥವರಿಂಲೇ ಸಮಾಜದಲ್ಲಿ ಅಶಾಂತಿ ನಿರ್ಮಾಣ ಆಗುವುದು' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಪರೇಶ್ ಮೇಸ್ತಾ ಸಾವು ಸಂಭವಿಸಿದಾಗ ಬಿಜೆಪಿಯವರು ಸದನದಲ್ಲಿ ಗಲಾಟೆ ಮಾಡಿದ್ದರು, ಉತ್ತರ ಕನ್ನಡದಲ್ಲೂ ಗಲಭೆ ಮಾಡಿಸಿದ್ರು. ಈ ಪ್ರಕರಣವನ್ನು ನಾನು ಸಿಬಿಐ ಗೆ ವಹಿಸಿದ್ದೆ. ಆಗ ಪ್ರಧಾನಿಯಾಗಿದ್ದವರು ನರೇಂದ್ರ ಮೋದಿ ಅವರು. ಗೃಹ ಸಚಿವರಾಗಿದ್ದವರು ಅಮಿತ್ ಶಾ ಅವರು. ಈಗ ಸಿಬಿಐ ವರದಿಯಲ್ಲಿ ಇದು ಆಕಸ್ಮಿಕ ಸಾವು ಎಂದು ಬಂದಿದೆ. ಅದಕ್ಕೆ ಬಿಜೆಪಿಯವರು ಸಿದ್ದರಾಮಯ್ಯನವರು ಸಾಕ್ಷ್ಯ ನಾಶ ಮಾಡಿದ್ರು ಎನ್ನುತ್ತಿದ್ದಾರೆ, ಇವರ ಯೋಗ್ಯತೆಗೆ 2008 ರಿಂದ 2013ರ ವರಗೆ ಅಥವಾ ಈಗ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಪ್ರಕರಣವನ್ನು ಸಿಬಿಐ ಗೆ ವಹಿಸಿದ್ದಾರ? ಇದೇ ಬಿಜೆಪಿಯವರು ಹಿಂದೆ ಸಿಬಿಐ ಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಎನ್ನುತ್ತಿದ್ದರು, ಜೆಡಿಎಸ್ ನವರು ಚೋರ್ ಬಚಾವೋ ಇನ್ಸ್‌ಟಿಟ್ಯೂಟ್ ಎನ್ನುತ್ತಿದ್ದರು. ಈಗ ಸಿಬಿಐ ಗೆ ಏನಂತ ಕರೀಬೇಕು ನೀವೇ ಹೇಳಿ ನೋಡೋಣ? ಬಿಜೆಪಿ ಅವರ ಕೆಲಸ ಅಪಪ್ರಚಾರ ಮತ್ತು ಸುಳ್ಳು ಹೇಳುವುದು' ಎಂದು ಕಿಡಿಕಾರಿದರು.
'ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅನ್ನೋದು ಒಂದು ತಿಂಗಳಲ್ಲಿ ಅಂತಿಮ ತೀರ್ಮಾನ ಆಗಲಿದೆ. ವರುಣಾ ಕ್ಷೇತ್ರದಲ್ಲಿ ಮಗ ಶಾಸಕನಾಗಿದ್ದಾನೆ. ನಾನು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಕ್ಕೆ ವಿಭಿನ್ನ ವ್ಯಾಖ್ಯಾನ ಮಾಡ್ತಾರೆ' ಎಂದು ತಿಳಿಸಿದರು.