ಕೋವಿಡ್ ನಿರ್ವಹಣೆಯಲ್ಲಿ ದ.ಕ ಜಿಲ್ಲೆಯ ಜನರು ನೀಡಿದ ಸಹಕಾರ ಮರೆಯಲು ಸಾಧ್ಯವಿಲ್ಲ: ಡಿಸಿ ಡಾ.ರಾಜೇಂದ್ರ

ಬೀಳ್ಕೊಡುಗೆ ಸಮಾರಂಭ

Update: 2022-10-29 17:44 GMT

ಮಂಗಳೂರು, ಅ.29; ಕೋವಿಡ್ ನಿರ್ವಹಣೆಯಲ್ಲಿ ದ.ಕ. ಜಿಲ್ಲೆಯ ಜನರು ಜಿಲ್ಲಾಡಳಿತಕ್ಕೆ  ನೀಡಿದ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದು ಮೈಸೂರು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಗೊಂಡ ಡಾ.ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ದ.ಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿಂದು ಹಮ್ಮಿ ಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಸಹಾಯ ದೊರೆತಿದೆ. ಕೋವಿಡ್ ಸಂದರ್ಭದಲ್ಲಿ  ಜಿಲ್ಲೆಯ ಜನತೆ, ವಿವಿಧ ಸಂಘ ಸಂಸ್ಥೆಗಳು, ಅಧಿಕಾರಿಗಳು ನೀಡಿದ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಡಾ.ರಾ ಜೇಂದ್ರ ಕೆ.ವಿ.ತಿಳಿಸಿದ್ದಾರೆ.

ಜನರಿಗೆ ನೆರವು ನೀಡುವ ಮನೋಭಾವ, ಕಾಳಜಿ ಇರುವ ಪತ್ರಕರ್ತರನ್ನು ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನು ನೋಡಿದ್ದೇನೆ. ಈ ಮನೋಭಾವದಿಂದಾಗಿ ಪತ್ರಕರ್ತರು ಅಧಿಕಾರಿಗಳ  ಜೊತೆಯಲ್ಲಿ ಗ್ರಾಮ ವಾಸ್ತವ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದಕ್ಷಿಣ ಕನ್ನಡ ಕಾರ್ಯನಿರತ  ಪತ್ರಕರ್ತರ ತಂಡದವರು ತನಗೆ ಸ್ಪೂರ್ತಿ ನೀಡಿದ್ದಾರೆ, ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾಡಳಿತಕ್ಕೆ ರಚನಾತ್ಮಕ ಸಲಹೆ, ಸಹಕಾರ ನೀಡುವ ಮೂಲಕ ಜನರ ಜೊತೆ ಹೆಚ್ಚು ಕೆಲಸ ಮಾಡಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪತ್ರಕರ್ತರನ್ನು ಡಾ. ರಾಜೇಂದ್ರ ನೆನಪಿಸಿಕೊಂಡರು.

ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿ ಹೊಂದಲು ವಿಪುಲ ಅವಕಾಶವನ್ನು ಹೊಂದಿದೆ. ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಂಡ ದ.ಕ ಜಿಲ್ಲೆಯ ಜನರ ಜೊತೆ ಬೆರೆತು ಸಾಕಷ್ಟು ಅನುಭವವನ್ನು ಪಡೆಯುವ ಅವಕಾಶ ದೊರಕಿದೆ ಎಂದು ಅವರು ತಿಳಿಸಿದ್ದಾರೆ.

ಸಮಾರಂಭದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ, ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಣೆ, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ಸಹಾಯಕ ಕಮಿಷನರ್ ಮದನ್ ಮೋಹನ್, ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್, ಡಿಸಿಎಫ್ ದಿನೇಶ್ ಕುಮಾರ್, ಮಂಗಳೂರು ಡಿಸಿಪಿ ಅಂಶು ಕುಮಾರ್  ಮೊದಲಾದವರು ಉಪಸ್ಥಿತರಿದ್ದರು.

Similar News