ಬಾಲಕಿಯರ ನಾಪತ್ತೆ ಪ್ರಕರಣ; ವಿದ್ಯಾರ್ಥಿಗಳ ನಡುವೆ ತಾರತಮ್ಯದಿಂದ ನೋಡದಂತೆ ಶಿಕ್ಷಕರಿಗೆ ಹೈಕೋರ್ಟ್ ಸೂಚನೆ

Update: 2022-10-31 16:41 GMT

ಬೆಂಗಳೂರು, ಅ.31: ಇತ್ತೀಚೆಗೆ ನಗರದ ಖಾಸಗಿ ಶಾಲೆಯೊಂದರ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, (High Court of Karnataka) ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ನಡುವೆ ತಾರತಮ್ಯದಿಂದ ನೋಡುವುದು ಮತ್ತು ಮನಸ್ಸಿಗೆ ನೋವುಂಟಾಗುವಂತೆ ನಡೆದುಕೊಳ್ಳದಂತೆ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದೆ.

ನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ವಿದ್ಯಾರ್ಥಿನಿಯರ ಶಾಲೆಯ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆ ಪ್ರಕರಣ ಸಂಬಂಧ ಶಾಲಾ ಮುಖ್ಯ ಶಿಕ್ಷಕಿ ಪಿ.ವಿ.ಸಿಸ್ಟರ್ ಕ್ಲಾರ ಅವರು ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರಿಪಡಿಸುವಂತೆ ಕೋರಿ ಸಲ್ಲಿಸಿದ್ದ ಹೆಬಿಯಾಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ವಿದ್ಯಾರ್ಥಿಗಳೊಂದಿಗೆ ಮಾನವೀತೆಯಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದೆ.

ಅಲ್ಲದೇ, ಪ್ರಕರಣ ಸಂಬಂಧ ಮುಖ್ಯ ಶಿಕ್ಷಕರು ಮತ್ತು ಇತರ ಸಿಬ್ಬಂದಿಯಿಂದ ಮುಂದಿನ ದಿನಗಳಲ್ಲಿ ಈ ರೀತಿ ನಡೆದುಕೊಳ್ಳುವುದಿಲ್ಲ ಎಂಬುದಾಗಿ ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠವು ಪ್ರಕರಣವನ್ನು ಇತ್ಯರ್ಥಪಡಿಸಿದೆ.

ಶೈಕ್ಷಣಿಕ ಭವಿಷ್ಯ ರೂಪಿಸುವಲ್ಲಿ ಪೋಷಕರು ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಶ್ರಮಿಸಬೇಕು ಎಂದು ಸೂಚನೆ ನೀಡಿದೆ. ಜತೆಗೆ, ಇಬ್ಬರೂ ಮಕ್ಕಳನ್ನು ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್‍ಗೆ ಒಳಪಡಿಸಬೇಕು. ಶಿಕ್ಷಣ ಸಂಸ್ಥೆಯ ಯಾವುದೇ ಸಿಬ್ಬಂದಿ ಮಕ್ಕಳ ಭಾವನೆಗೆ ನೋವುಂಟು ಮಾಡುವ ರೀತಿಯಲ್ಲಿ ವರ್ತಿಸಬಾರದು. ಮಕ್ಕಳಲ್ಲಿ ಭೇದವನ್ನುಂಟು ಮಾಡುವ ಮಾತುಗಳನ್ನಾಡಬಾರದು. ಸ್ವಂತ ಮಕ್ಕಳಂತೆ ನೋಡಿಕೊಂಡು ಶಿಕ್ಷಣ ಮುಂದುವರೆಸಲು ನೆರವಾಗಬೇಕು ಎಂದು ಸೂಚನೆ ನೀಡಿತು.

ಮಕ್ಕಳ ಎದುರಲ್ಲಿ ಪೋಷಕರು ನಾಗರಿಕರಂತೆ ವರ್ತಿಸಬೇಕು ಎಂದು ಸೂಚನೆ ನೀಡಿದೆ. ಮಕ್ಕಳ ಪತ್ತೆಗೆ ಶ್ರಮಿಸಿ ಪೆÇಲೀಸ್ ಇಲಾಖೆ ಸಿಬ್ಬಂದಿಯಾದ ಪುಲಕೇಶಿ ನಗರದ ಠಾಣೆಯ ಇನ್ಸ್‍ಪೆಕ್ಟರ್ ಪಿ.ಎಂ.ಕಿರಣ್ ಮತ್ತವರ ಸಿಬ್ಬಂದಿಯನ್ನು ಹೈಕೋರ್ಟ್ ಪ್ರಶಂಸಿದೆ.

ಇದನ್ನೂ ಓದಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಶಿಕ್ಷಕರಿಂದ ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠ: ಶಾಲೆಯ ಮುಖ್ಯ ಶಿಕ್ಷಕಿ ಕ್ಲಾರ ಅವರು, ಸುಮಾರು 127 ವರ್ಷಗಳ ಇತಿಹಾಸವಿರುವ ಶಿಕ್ಷಣ ಸಂಸ್ಥೆಯಾದ ಸೇಂಟ್ ಜೋಸೆಫ್ ಕಾನ್ವೆಂಟ್ ವಿದ್ಯಾರ್ಥಿನಿಯರ ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿನಿಯ ಘನತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಿದ್ದೇವೆ. ಮುಂದೆಯೂ ಅದನ್ನೇ ಮುಂದುವರೆಸುತ್ತೇವೆ. ಜತೆಗೆ, ಯಾವುದೇ ಕಾರಣಕ್ಕೆ ಮಕ್ಕಳಲ್ಲಿ ತಾರತಮ್ಯ ಅನುಸರಿಸುವುದಿಲ್ಲ. ಮಕ್ಕಳು ತಪ್ಪು ದಾರಿಗೆ ಹೋದಲ್ಲಿ ಅವರನ್ನು ಸರಿ ಪಡಿಸುವುದಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಎಲ್ಲ ಸಿಬ್ಬಂದಿಗೆ ನಿರ್ದೇಶನ ನೀಡಲಾಗುವುದು. ಮಕ್ಕಳೊಂದಿಗೆ ಏರು ಧ್ವನಿಯಿಂದ ಮಾತನಾಡುವುದು ಮತ್ತು ಭಾವನೆಗಳಿಗೆ ಧಕ್ಕೆಯಾಗದಂತೆ ವರ್ತಿಸಲು ಸೂಚಿಸುತ್ತಿರುತ್ತೇನೆ.

ಭವಿಷ್ಯದಲ್ಲಿ ಮಕ್ಕಳಿಗೆ ಯಾವುದೇ ಸಿಬ್ಬಂದಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಅಲ್ಲದೆ, ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಜ್ಞಾನವನ್ನು ವೃದ್ಧಿಸಲು ಮನಶಾಸ್ತ್ರಜ್ಞರಿಂದ ಕಾಲ ಕಾಲಕ್ಕೆ ತರಬೇತಿ ಕಾರ್ಯಾಗಾರ ಕೈಗೊಳ್ಳಲಾಗುವುದು ಎಂಬುದಾಗಿ ನ್ಯಾಯಪೀಠಕ್ಕೆ ಪ್ರಮಾಣಪತ್ರದ ಮೂಲಕ ಭರವಸೆ ನೀಡಿದ್ದರು. ಈ ಅಂಶವನ್ನು ದಾಖಲಿಸಿಕೊಂಡ ಪ್ರಕರಣವನ್ನು ಇತ್ಯರ್ಥ ಪಡಿಸಿತು.

Similar News