ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಸಚಿವ ಎಸ್.ಟಿ.ಸೋಮಶೇಖರ್ ಗೆ ಮುತ್ತಿಗೆ, ಮಹಿಳೆಯರು ಸೇರಿ ಹಲವರು ವಶಕ್ಕೆ

ನಿವೇಶನ ಹಕ್ಕು ಪತ್ರ ನೀಡಲು ಒತ್ತಾಯ

Update: 2022-11-01 08:04 GMT

ಮೈಸೂರು: ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ದಿಢೀರನೇ ಮುತ್ತಿಗೆ ಹಾಕಿದ ಅಲೆಮಾರಿಗಳು ನಿವೇಶನದ ಹಕ್ಕು ಪತ್ರ ನೀಡುವಂತೆ ಆಗ್ರಸಿ ಧಿಕ್ಕಾರ ಕೂಗಿದರು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಮಂಗಳವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 67 ನೇ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಈ ಘಟನೆ ನಡೆದಿದ್ದು ,  ಅಲೆಮಾರಿಗಳು ದಿಢೀರನೆ ಸಚಿವರನ್ನು ಮುತ್ತಿಗೆ ಹಾಕಿದ್ದರಿಂದ  ಜಿಲ್ಲಾಡಳಿತ ಮತ್ತು ಪೊಲೀಸರು ಕಂಗಾಲಾದರು‌.

ಸಚಿವರು ಕನ್ನಡ ಬಾವುಟ ಧ್ವಜಾರೋಹಣ ನೆರವೇರಿಸಿ,  ವೇದಿಕೆಯಲ್ಲಿ ಕನ್ನಡ ಹೋರಾಟಗಾರರಿಗೆ ಸನ್ಮಾನ ಮಾಡಿದ ಬಳಿಕ ಭಾರತಾಂಭೆ ರಥದ ವಾಹನಕ್ಕೆ ಚಾಲನೆ ನೀಡಲು ಆಗಮಿಸುತ್ತಿದ್ದಂತೆ ಅಲ್ಲಲ್ಲಿ ಜನರ ಮಧ್ಯೆ ನಿಂತಿದ್ದ ಅಲೆಮಾರಿ ಸಮುದಾಯದ ಹೆಂಗಸರು, ಮಕ್ಕಳು ಹಾಗೂ ಯುವಕರು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅವರ ನೇತೃತ್ವದಲ್ಲಿ  ಸಚಿವರನ್ನು ಮುತ್ತಿಗೆ ಹಾಕಿದರು. ತಕ್ಷಣ ಪೊಲೀಸರು ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಸುತ್ತುವರಿದಿದ್ದಾರೆ. ಇದರಿಂದ ಗೊಂದಲಕ್ಕೊಳಗಾದ ಸಚಿವರು ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿ, ಅಲ್ಲಿಂದ ತೆರಳಿದ್ದಾರೆನ್ನಲಾಗಿದೆ. 

ಇದೇ ವೇಳೆ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ''ನಾವು ಕನ್ನಡ ರಾಜ್ಯೋತ್ಸವಕ್ಕೆ ಅಡ್ಡಿಪಡಿಸಲು ಬಂದಿಲ್ಲ, ನಾವು ಕನ್ನಡಿಗರು, ಕನ್ನಡ ಓದುವವರು ಕಳೆದ 50 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿವೇಶನದ ಹಕ್ಕು ಪತ್ರ ನೀಡುವಂತೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇದೂವರೆಗೂ ಬಂದು ನಮ್ಮ ಸಮಸ್ಯೆ ಕೇಳಲಿಲ್ಲ, ದಸರಾ ಸಮಯದಲ್ಲೇ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ದಸರಾ ನಂತರ ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು ಹಾಗಾಗಿ ನಾವು ಸುಮ್ಮನಿದ್ದೆವು. ದಸರಾ ಮುಗಿದು ತಿಂಗಳು ಕಳೆದರೂ ನಮ್ಮ ಸಮಸ್ಯೆ ಕೇಳಲು ಯಾರೂ ಬಂದಿಲ್ಲ'' ಎಂದು ಆರೋಪಿಸಿದರು. 

''ಹೀಗಾಗಿ  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗೆ ಮುತ್ತಿಗೆ ಹಾಕಿದ್ದೇವೆ. ನಮ್ಮ ಸಮಸ್ಯೆ ಈಗಲೂ ಬಗೆಹರಿಯದಿದ್ದರೆ ಮುಂದೆ ಆಗಬಹುದಾದ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ'' ಎಂದು ಎಚ್ಚರಿಸಿದರು.

ಮಹಿಳೆಯರು, ಮಕ್ಕಳು ಸೇರಿ ಹಲವರು ವಶಕ್ಕೆ: ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು, ಮೂರು ವಾಹನಗಳಲ್ಲಿ ಐವತ್ತಕ್ಕೂ ಹೆಚ್ಚು ಮಂದಿಯನ್ನು ನಗರ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆದೊಯ್ದರು. ಈ ವೇಳೆ ಸಣ್ಣ ಸಣ್ಣ ಮಕ್ಕಳನ್ನೂ ಮಹಿಳೆಯರನ್ನು ಮಕ್ಕಳನ್ನೂ ಬಿಡದೆ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ. 

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಭಾಗ್ಯಮ್ಮ, ಕಿರಂಗೂರು ಸ್ವಾಮಿ, ಶಿವರಾಜು ಅರಸಿನಕೆರೆ, ಮಹದೇವ, ಅನಿತ, ರಂಗಸ್ವಾಮಿ, ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Similar News