ಸಹೋದರನ ಪುತ್ರ ಸಾವಿನ ಬಗ್ಗೆ ತನಿಖೆ ನಡೆಸುವಲ್ಲಿ ಪೊಲೀಸ್ ಇಲಾಖೆ ವಿಫಲ: ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪ

Update: 2022-11-05 13:48 GMT

ದಾವಣಗೆರೆ, ನ.5: ' ಸಹೋದರನ ಪುತ್ರ ಚಂದ್ರಶೇಖರ್ ಕಾರು ಅಪಘಾತಕ್ಕೀಡಾಗಿಲ್ಲ. ಉದ್ದೇಶಪೂರ್ವಕವಾಗಿ ಯಾರೋ ಆತನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ. 

ಹೊನ್ನಾಳಿ ತಾಲೂಕಿನ ಅರಬಘಟ್ಟ-ನ್ಯಾಮತಿ ರಸ್ತೆಯ ಕಡದಕಟ್ಟೆ ಸಮೀಪದ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ  ಚಂದ್ರಶೇಖರ್ ಮೃತದೇಹ ಪತ್ತೆಯಾದ ಸ್ಥಳಕ್ಕೆ ಶನಿವಾರ ಮುಖಂಡರು, ಬೆಂಬಲಿಗರೊಂದಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸರ್ಕಾರದ ಭಾಗವಾಗಿ ನಾನು ಮಾತನಾಡಬಾರದು. ಆದರೂ, ಚಂದ್ರು ಸಾವಿನ ತನಿಖೆಯಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಹೇಳಲೇಬೇಕು' ಎಂದರು.

''ಯಡಿಯೂರಪ್ಪ ನಾಲ್ಕು ಸಲ ಕರೆ ಮಾಡಿ, ಹೊನ್ನಾಳಿಗೆ ಬಂದು ಹೋದರು. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು, ಮಕ್ಕಳು ಚಂದ್ರು ಸಾವಿಗೆ ಕಣ್ಣೀರು ಹಾಕುತ್ತಿದ್ದಾರೆ. ಮಗನ ಸಾವಿನಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಚಂದ್ರು ನಿರಾಪರಾಧಿ?. ಆತನ ಸಾವಿನ ಲ್ಲಿ ರಾಜಕಾರಣ ಮಾಡಿಲ್ಲ. ಜನಾನುರಾಗಿ ವ್ಯಕ್ತಿತ್ವದ ಚಂದ್ರು ಸಾವು ಈಗಲೂ ನಮ್ಮನ್ನು ತೀವ್ರವಾಗಿ ಕಾಡುತ್ತಿದೆ'' ಎಂದು ಅವರು ತಿಳಿಸಿದರು.

''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಸಹೋದರ. ನಮ್ಮ ಬಗ್ಗೆ ಸಾಕಷ್ಟು ಕಳಕಳಿ ಹೊಂದಿದ್ದಾರೆ. ಚಂದ್ರಶೇಖರ್ ಸಾವಿನ ಬಗ್ಗೆ ಪಾರದರ್ಶಕ ತನಿಖೆ ಮಾಡಿಸುವ ಭರವಸೆ ಇದೆ. ಮುಖ್ಯಮಂತ್ರಿಗಳೇ ಹೇಳಿದ್ದು, ಸೂಕ್ತ ತನಿಖೆಯನ್ನು ಮಾಡಿಸುತ್ತಾರೆಂಬ ವಿಶ್ವಾಸವೂ ನಮ್ಮೆಲ್ಲರಿಗೂ ಇದೆ '' ಎಂದು ಅವರು ಹೇಳಿದರು.

Similar News