ಮೈಸೂರು | ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶ: ಮೂವರು ರೈತರು ಮೃತ್ಯು
ಮೈಸೂರು, ನ.6: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ಮೂವರು ರೈತರು ದಾರುಣವಾಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ರವಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಮೃತರನ್ನು ರಾಚೇಗೌಡ (60), ಮಹದೇವಸ್ವಾಮಿ (38) ಹಾಗೂ ಹರೀಶ್ (32) ಎಂದು ಗುರುತಿಸಲಾಗಿದೆ.
ರಾಚೇಗೌಡ ಇಂದು ಮುಂಜಾನೆ ಭತ್ತದ ಗದ್ದೆಗೆ ಗೊಬ್ಬರ ಹಾಕಲು ಹೋದಾಗ ತಮ್ಮ ಜಮೀನಿನಲ್ಲಿ ಬಿದ್ದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಗಮನಿಸದೆ ತುಳಿದಿದ್ದಾರೆ. ವಿದ್ಯುತ್ ಆಘಾತಕ್ಕೆ ಒಳಗಾಗಿ ಒದ್ದಾಡುತ್ತಿದ್ದ ಅವರನ್ನು ರಕ್ಷಿಸಲು ಮಹದೇವಸ್ವಾಮಿ ಮುಂದಾಗಿದ್ದಾರೆ. ಈ ವೇಳೆ ಮಹದೇವಸ್ವಾಮಿ ಕೂಡಾ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಅವರ ಪ್ರಾಣ ಉಳಿಸಲು ಮುಂದಾದ ಹರೀಶ್ ಕೂಡಾ ಆಘಾತಕ್ಕೊಳಗಾಗಿದ್ದಾರೆ. ಈ ರೀತಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು, ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.