11,136 ಪೌರ ಕಾರ್ಮಿಕರಿಗೆ ಖಾಯಂ ನೌಕರಿ ನೀಡಲು ಅಧಿಸೂಚನೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-11-06 12:53 GMT

ಬೆಂಗಳೂರು: ರಾಜ್ಯದಲ್ಲಿನ 11,136 ಪೌರ ಕಾರ್ಮಿಕರಿಗೆ ಖಾಯಂ ನೌಕರಿ ನೀಡಲು ಅಧಿಸೂಚನೆ ಹೊರಡಿಸಲಾಗಿದೆ. ಉಳಿದವರಿಗೆ 2 ಮತ್ತು 3ನೆ ಹಂತದಲ್ಲಿ ಬೆಂಗಳೂರು ಮತ್ತು ಇತರೆ ನಗರಗಳಲ್ಲಿನ ಪೌರ ಕಾರ್ಮಿಕರನ್ನು ಸರಕಾರಿ ನೌಕರರನ್ನಾಗಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರವಿವಾರ ಬ್ಯಾಟರಾಯನಪುರ ಕ್ಷೇತ್ರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಭಗವಾನ್ ಬುದ್ಧ ಡಾ.ಬಿ.ಆರ್.ಅಂಬೇಡ್ಕರ್ ಲೆಕ್ ಪಾರ್ಕ್ ಉದ್ಯಾನವನ ನಾಮಕರಣ ಸಮಾರಂಭ ಹಾಗೂ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರ ಆಪತ್ತು ನಿಧಿಯನ್ನು 2 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಸಮಿತಿ ರಚಿಸಿ ಅದರ ಶಿಫಾರಸ್ಸಿನನ್ವಯ ಕ್ರಮ ಕೈಗೊಳ್ಳಲಾಗಿದೆ. ದೀನ ದಲಿತರ ಕಲ್ಯಾಣವೆ ಸರಕಾರ ಗುರಿ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಹೇಳಿದರು.

ಬುದ್ಧ ಜ್ಞಾನದ ಪ್ರತೀಕ. ಬುದ್ಧ ತನ್ನ ರಾಜ್ಯವನ್ನು ತ್ಯಜಿಸಿ, ಜ್ಞಾನವನ್ನು ಪಡೆದು ಸಾಮಾಜಿಕ, ಧಾರ್ಮಿಕ ಮೌಲ್ಯಗಳನ್ನು ಜಗತ್ತಿಗೆ ಸಾರಿದರು. ಅಂಬೇಡ್ಕರ್, ಬುದ್ಧನ ಮಾರ್ಗದಲ್ಲಿ ನಡೆದು ಸ್ವತಂತ್ರ ಭಾರತದಲ್ಲಿ ಎಲ್ಲರಿಗೂ ಸಮನಾದ ಹಕ್ಕುಗಳನ್ನು ನೀಡಿ, ಜಾಗೃತಿಯನ್ನು ಮೂಡಿಸಿ, ದೇಶದಲ್ಲಿ ಸಮಾನತೆ, ಏಕತೆ, ಪ್ರಜಾಪ್ರಭುತ್ವ ಉಳಿಸಿದ್ದಾರೆ. ಆಧುನಿಕ ಭಾರತದ ಪ್ರಜಾಪ್ರಭುತ್ವದ ಪಿತಾಮಹ ಅಂಬೇಡ್ಕರ್. ಸಂವಿಧಾನವನ್ನು ರಚಿಸಿರುವ ಮಹಾತ್ಮನನ್ನು ನಾವೆಲ್ಲರೂ ಸದಾ ಕಾಲ ಸ್ಮರಿಸಬೇಕು’ ಎಂದರು.

ಮೀಸಲಾತಿ ಹೆಚ್ಚಳ ಸಂವಿಧಾನಬದ್ಧವಾಗಿ ಮಾಡುತ್ತಿದ್ದೇವೆ. ಇಲ್ಲಿನ ಕಾನ್ಶಿರಾಮ್ ನಗರದ ಅಭಿವೃದ್ಧಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧ. ಅಂಬೇಡ್ಕರ್ ಭವನದಲ್ಲಿರುವ ಕಾರ್ಯಕ್ರಮಗಳು, ಸಮಾಜದ ಅಭಿವೃದ್ಧಿಗೆ ಪೂರಕ. ಸಕಾರಾತ್ಮಕ ಚಿಂತನೆಯ ಕಾರ್ಯಕ್ರಮಗಳು ಇಲ್ಲಿ ನಡೆಯಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬಿಎಸ್ಪಿ ಮುಖಂಡ ಮಾರಸಂದ್ರ ಮುನಿಯಪ್ಪ, ಹಿರಿಯ ಅಧಿಕಾರಿ ರಾಕೇಶ್ ಸಿಂಗ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

Similar News