ರಾಜ್ಯದ ಪ್ರತಿ ಮೂರು ಜಿಲ್ಲೆಗೆ ಒಂದು ಎಸ್ ಡಿಆರ್ ಎಫ್ ಪಡೆ ನಿಯೋಜನೆಗೆ ನಿರ್ಧಾರ: ಗೃಹ ಸಚಿವ ಆರಗ ಜ್ಞಾನೇಂದ್ರ
ವಿವಿಧ ಇಲಾಖೆಗಳ 61 ಅಧಿಕಾರಿ/ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭ
ಬೆಂಗಳೂರು: ರಾಜ್ಯ ವಿಪತ್ತು ಹಾಗೂ ತುರ್ತು ಸೇವೆಗಳ ಪಡೆಯನ್ನು ಇನ್ನಷ್ಟು ಹೆಚ್ಚು ಬಲ ಪಡಿಸಲು ಪ್ರತಿ ಮೂರು ಜಿಲ್ಲೆ ಗಳಿಗೆ ಒಂದರಂತೆ ಎಸ್ ಡಿ ಆರ್ ಎಫ್ ಪಡೆಗಳನ್ನು (SDPF) ನಿಯೋಜಿಸಲು ರಾಜ್ಯ ಸರಕಾರ ಯೋಜನೆಯನ್ನು ರೂಪಿಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ರಾಜ್ಯ ಪೌರ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹಾಗೂ ಎಸ್ ಡಿ ಆರ್ ಎಫ್ ನಿರ್ದೇಶನಾಲಯ ವತಿಯಿಂದ ರಾಜಭವನದಲ್ಲಿ ಆಯೋಜಿಸಲಾದ ವಿಶಿಷ್ಟ ಸೇವೆಗೈದ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಾಕೃತಿಕ ಸಂಕಷ್ಟದ ಸಮಯದಲ್ಲಿ, ಕ್ಷಿಪ್ರವಾಗಿ ಸೇವೆ ಸಲ್ಲಿಸಲು ಅನುಕೂಲವಾಗಲು, ಯೋಜನೆ ಹಮ್ಮಿಕೊಳ್ಳಲಾಗುತ್ತಿದ್ದು, ನಾಗರಿಕರ ಸುರಕ್ಷತೆ ಹಾಗೂ ಆಸ್ತಿ ಪಾಸ್ತಿ ಗಳು, ಹಾಗೂ ಸಾರ್ವಜನಿಕ ಸೊತ್ತುಗಳ ರಕ್ಷಣೆ ಮಾಡಲು ಸರಕಾರ ಬದ್ಧ ಎಂದರು.
ಹಲವಾರು ವರ್ಷಗಳ ನಂತರ ರಾಜ್ಯ ಅಗ್ನಿ ಶಾಮಕ ದಳವನ್ನು ಬಲಪಡಿಸಲು ಸುಮಾರು 1,547 ವಿವಿಧ ದರ್ಜೆಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ತರಬೇತಿ ನೀಡಲಾಗುತ್ತಿದೆ ಎಂದ ಸಚಿವರು, ಅವಘಡದ ಸಂದರ್ಭದಲ್ಲಿ ಅತ್ಯಂತ ಎತ್ತರದ ಕಟ್ಟಡವನ್ನೂ ತಲುಪಲು ಅನುಕೂಲವಾಗುವಂತೆ ಸುಮಾರು 30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಏರಿಯಲ್ ಲ್ಯಾಡರ್ ಅನ್ನು ಇಲಾಖೆಗೆ ಸಮರ್ಪಿಸಲಾಗಿದೆ ಎಂದರು.
ಸಮಾರಂಭದಲ್ಲಿ ಸುಮಾರು 61 ಸಿಬ್ಬಂದಿಗಳಿಗೆ, ಪದಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಮರ ಕುಮಾರ್ ಪಾಂಡೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಇತರರು ಉಪಸ್ಥಿತರಿದ್ದರು.