'ಹಿಂದೂ' ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದ...: ಸತೀಶ್ ಜಾರಕಿಹೊಳಿ

Update: 2022-11-07 14:48 GMT

ಬೆಂಗಳೂರು, ನ.7: ಹಿಂದೂ ಎನ್ನುವ ಪದ ಅಶ್ಲೀಲವಾಗಿದೆ. ಇದರ ಮೂಲ ಭಾರತೀಯವಲ್ಲ, ಬದಲಾಗಿ ಪರ್ಷಿಯನ್ ನೆಲಕ್ಕೆ ಸೇರಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ವಿಶ್ಲೇಷಿಸಿದ್ದಾರೆ.

ಬೆಳಗಾವಿಯ ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ‘ಮನೆಮನೆಗೆ ಬುದ್ಧ, ಬಸವ, ಅಂಬೇಡ್ಕರ್' ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ''ಜಗತ್ತಿನಲ್ಲಿ ಶಿವಾಜಿ ಅವರ ಒಂದೇ ಒಂದು ಚಿತ್ರಕಲೆ ಇದ್ದು, ಅದನ್ನು ರಚಿಸಿದ್ದು ಕುಲಕರ್ಣಿಯೋ, ದೇಶಪಾಂಡೆಯೋ ಅಲ್ಲ. ಬದಲಾಗಿ, ಮುಹಮ್ಮದ್ ಮದಾರಿ ಎನ್ನುವ ಮುಸ್ಲಿಮ್ ಕಲಾವಿದ'' ಎಂದರು.

''ಈಗ ತಮ್ಮ ಬೇಳೆ ಬೇಯಿಸಿಕೊಳ್ಳಲು ಹಿಂದೂ, ಮುಸ್ಲಿಮ್ ದಲಿತರಲ್ಲಿ ಹೋರಾಟ ಮಾಡಿಸುತ್ತಿದ್ದಾರೆ. ವಾಸ್ತವವಾಗಿ ಶಿವಾಜಿ ಮಹಾರಾಜರ ಕಾಲದಲ್ಲಿ ಹಿಂದೂ, ಮುಸ್ಲಿಮ್ ಹೋರಾಟ ಇರಲಿಲ್ಲ. ಅವರು ಎಲ್ಲರನ್ನೂ ಸಮಾನವಾಗಿ ಕಂಡವರು. ಅಷ್ಟೇ ಅಲ್ಲದೆ, ನಮಗೆ ತಪ್ಪು ಇತಿಹಾಸವನ್ನು ಹೇಳಲಾಗುತ್ತಿದೆ. ಶಿವಾಜಿ ಮಹಾರಾಜರು, ಸಂಭಾಜಿ ಮಹಾರಾಜರು, ಬಸವೇಶ್ವರರು, ಸಂತ ತುಕಾರಾಮ ಮಹಾರಾಜರು ಸಾವನ್ನಪ್ಪಿದ ಇತಿಹಾಸ ತಿರುಚಲಾಗಿದೆ'' ಎಂದು ನುಡಿದರು.

''ಸಮಯ ಕಳೆಯಲು, ಹವ್ಯಾಸಕ್ಕಾಗಿ ಬರೆದ ಪುಸ್ತಕಗಳನ್ನೆ ಮಹಾನ್ ಗ್ರಂಥಗಳಾಗಿ ಮಾಡಲಾಗಿದೆ. ಈಗ ಅವು ನಮ್ಮನ್ನು ಆಳುತ್ತಿವೆ. ಅವುಗಳನ್ನು ಮುಂದೆ ಇಟ್ಟುಕೊಂಡು ಕೆಲವರು ಧರ್ಮ, ಜಾತಿ ಎನ್ನುತ್ತ ದಿಕ್ಕು ತಪ್ಪಿಸುತ್ತಿದ್ದಾರೆ'' ಎಂದು ಸತೀಶ್ ಟೀಕಿಸಿದರು.

Similar News