ಉತ್ತರ ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ಸತೀಶ್ ಜಾರಕಿಹೊಳಿಯವರ ರಾಜಕೀಯ ಹಿನ್ನಲೆ ಗೊತ್ತಿದೆ: ಬಿ.ಕೆ.ಹರಿಪ್ರಸಾದ್
''ಬಿಜೆಪಿಯವರು ಹಿಂದೂ ಧರ್ಮದ ಬಗ್ಗೆ ಮಾತನಾಡದೇ ಇರುವುದೇ ಒಳ್ಳೆಯದು''
ಬೆಂಗಳೂರು, ನ. 8: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಶಾಸಕ ಸತೀಶ್ ಜಾರಕಿಹೊಳಿ ಅವರು ಬುದ್ದ, ಬಸವ, ಅಂಬೇಡ್ಕರ್ ವಿಚಾರಗಳಿಂದ ರಾಜಕೀಯ ಪ್ರಾರಂಭ ಮಾಡಿದವರು. ‘ಹಿಂದೂ’ ಪದದ ಹೇಳಿಕೆ ಅವರ ವೈಯಕ್ತಿಕವಾದದ್ದು. ಮಾನವ ಬಂಧುತ್ವ ವೇದಿಕೆಯ ಮೂಲಕ ಮೌಢ್ಯಾಚರಣೆ ವಿರುದ್ಧ ಜಾಗೃತಿ ನಡೆಸುತ್ತಿದ್ದಾರೆ’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸತೀಶ್ ಆವರು ವೈಚಾರಿಕ ವಿಷಯಗಳನ್ನ ಜನರಿಗೆ ತಲುಪಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ಸತೀಶ್ ಜಾರಕಿಹೊಳಿಯವರ ರಾಜಕೀಯ ಹಿನ್ನಲೆ ಗೊತ್ತಿದೆ. ಅಲ್ಲಿನ ಜನರಿಗೆ ಅದು ವಿವಾದ ಎಂದು ಭಾವಿಸುವುದಿಲ್ಲ. ಹೇಳಿಕೆಯಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸತೀಶ್ ಜಾರಕಿಹೊಳಿ ಒಬ್ಬ ಹಿಂದೂ. ಹಿಂದೂಧರ್ಮದ ಒಳಗೆ ಇರುವ ಅಸಮಾನತೆಗಳ ಬಗ್ಗೆ ಅವರು ಬಂಧುತ್ವ ವೇದಿಕೆಯಲ್ಲಿ ಮಾತನಾಡಿದ್ದಾರೆ. ಅದನ್ನ ಅನಗತ್ಯ ವಿವಾದ ಮಾಡಬಾರದು’ ಎಂದು ಕೋರಿದರು.
‘ಬಿಜೆಪಿಯ ಹಿಂದುತ್ವವಾದಿಗಳಿಗೂ ಹಿಂದೂಧರ್ಮಕ್ಕೂ ಸಂಬಂಧವೇ ಇಲ್ಲ. ಸಾವರ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಸಂಬಂಧವೇ ಇಲ್ಲ ಎಂದು. ಬಿಜೆಪಿಯ ನಾಯಕಿ ಸುಶ್ಮಾ ಸ್ವರಾಜ್ ಅವರೇ ಹೇಳಿದ್ದಾರೆ. ಚುನಾವಣಾ ಭಾಷಣದಲ್ಲಿ, ರಾಮಮಂದಿರ ಚುನಾವಣಾ ವಿಷಯವೇ ಹೊರತು ಹಿಂದೂಧರ್ಮದ್ದಲ್ಲ ಎಂದು. ಹಿಂದೂ ಧರ್ಮ ಬಿಜೆಪಿಯ ಗುತ್ತಿಗೆಯಲ್ಲ, ಬಿಜೆಪಿಯವರು ಹಿಂದೂ ಧರ್ಮದ ಬಗ್ಗೆ ಮಾತನಾಡದೇ ಇರುವುದೇ ಒಳ್ಳೆಯದು’ ಎಂದು ಅವರು ಹೇಳಿದರು.
‘ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಮೇಲೆ ಕೇವಲ ರಾಜ್ಯಕ್ಕೆ ಮಾತ್ರ ಶಕ್ತಿಯಲ್ಲ, ಇಡೀ ದೇಶಕ್ಕೆ ಶಕ್ತಿ. ಎಐಸಿಸಿ ಅಧ್ಯಕ್ಷರಿಗಿರುವ ಶಕ್ತಿಯೇ ಬೇರೆ. ನಮ್ಮಲ್ಲಿ ಯಾವ ಅಧಿಕಾರ ಕೇಂದ್ರವೂ ಇಲ್ಲ, ಕೇವಲ ಕಾಂಗ್ರೆಸ್ ಪವರ್ ಪಾಯಿಂಟ್ ಮಾತ್ರ ಇದೆ. ಖರ್ಗೆ ಅವರಿಗೆ ಟಿಕೆಟ್ ಕೊಡಿ ಎಂದು ಆಕಾಂಕ್ಷಿಗಳು ಹೋಗುವುದರಲ್ಲಿ ತಪ್ಪೇನಿದೆ. ಬಿಜೆಪಿಯಲ್ಲಿ ಕೇಶವ ಕೃಪಕ್ಕೆ ಅರ್ಜಿ ಸಲ್ಲಿಸಬೇಕು, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಒಂದು ಸಮಿತಿ ಇದೆ. ಆಂತರಿಕ ಪ್ರಜಾಪ್ರಭುತ್ವ ಇದೆ’
-ಬಿ.ಕೆ.ಹರಿಪ್ರಸಾದ್ ಪರಿಷತ್ ವಿಪಕ್ಷ ನಾಯಕ