ಟಿಇಟಿ ಪರೀಕ್ಷೆ ಪ್ರವೇಶ ಪತ್ರದಲ್ಲಿ ಅಶ್ಲೀಲ ಫೋಟೋ: ಶಿಕ್ಷಣ ಇಲಾಖೆ ಸ್ಪಷ್ಟೀಕರಣ

Update: 2022-11-08 18:40 GMT

ಬೆಂಗಳೂರು, ನ. 8: ಶಿಕ್ಷಕರ ಅರ್ಹತಾ ಪರೀಕ್ಷೆ(Teacher Eligibility Test) ಪ್ರವೇಶ ಪತ್ರದ ಅಭ್ಯರ್ಥಿ ಭಾವಚಿತ್ರದ ಬದಲಿಗೆ ಅಶ್ಲೀಲ ಫೋಟೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಿ, ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಕೋರಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

ಟಿಇಟಿ ಪರೀಕ್ಷೆ ಮಹಿಳಾ ಅಭ್ಯರ್ಥಿಯೊಬ್ಬರ ಪ್ರವೇಶ ಪತ್ರದಲ್ಲಿ ಅವರ ಭಾವಚಿತ್ರದ ಬದಲಿಗೆ ಅಶ್ಲೀಲ ಫೋಟೋ ಬಂದಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಶಿಕ್ಷಣ ಇಲಾಖೆ ವೈಫಲ್ಯದ ವಿರುದ್ದವೂ ಆಕ್ಷೇಪ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಇಲಾಖೆ ಸ್ಪಷ್ಟನೆ ನೀಡಿದೆ.

'ಟಿಇಟಿ ಪ್ರವೇಶ ಪರೀಕ್ಷೆಯು ನ.6ರಂದು ತಾಜ್ಯದ 781 ಕೇಂದ್ರಗಳಲ್ಲಿ ನಡೆದಿದ್ದು, 3,32,913 ಅಭ್ಯರ್ಥಿಗಳು ಹಾಜರಾಗಿದ್ದು, ಯಾವುದೇ ಲೋಪವಿಲ್ಲದೆ ನಡೆದಿದೆ. ಪ್ರತಿ ಅಭ್ಯರ್ಥಿಯು ಟಿಇಟಿ ಪರೀಕ್ಷೆಗೆ ಆನ್‍ಲೈನ್ ಅರ್ಜಿ ಸಲ್ಲಿಸುವ ಮುನ್ನ ತಾನೇ ತನ್ನ ಯುಸರ್ ಐಡಿ, ಪಾಸ್‍ವರ್ಡ್ ಸೃಷ್ಟಿಸಿ, ನೋಂದಣಿ ಮಾಡಿಕೊಂಡಿರುತ್ತಾರೆ. ಅದು ಸಂಪೂರ್ಣ ಗೌಪ್ಯವಾಗಿದ್ದು, ಅಭ್ಯರ್ಥಿ ಹೊರತುಪಡಿಸಿ ಇತರರು ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ’ ಎಂದು ಪ್ರಕಟನೆಯಲ್ಲಿ ಇಲಾಖೆ ಸ್ಪಷ್ಟಪಡಿಸಿದೆ.

- FIR ದಾಖಲು:  ಚಿಕ್ಕಮಗಳೂರಿನ ಕೊಪ್ಪದ ವಿದ್ಯಾರ್ಥಿನಿಯೊಬ್ಬಳು ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ರುದ್ರಪ್ಪ ಕಾಲೇಜಿನಲ್ಲಿ ಟಿಇಟಿ ಪರೀಕ್ಷೆ ಬರೆಯಲು ಬಂದಿದ್ದು, ಯುವತಿಯ ಪ್ರವೇಶ ಪತ್ರದಲ್ಲಿ ಸನ್ನಿಲಿಯೋನ್ ಪೋಟೋ ಬಂದಿರುವುದಕ್ಕೆ ವಿದ್ಯಾರ್ಥಿನಿ ಪರೀಕ್ಷೆ ಬರೆಯುವ ಅರ್ಧ ಗಂಟೆಯ ಮುಂಚೆ ಕಾಲೇಜಿನ ಪ್ರಾಂಶುಪಾಲರಿಗೆ ಹೋಗಿ ಈ ಬಗ್ಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ.

ಈ ಸಮಸ್ಯೆಯನ್ನು ಪ್ರಾಂಶುಪಾಲರು ಸಾರ್ವಜನಿಕ ಶಿಕ್ಷಣ ಅಧಿಕಾರಿಗಳ ಗಮನಕ್ಕೆ  ತಂದಿದ್ದಾರೆ.  ಪರೀಕ್ಷೆ ನಡೆದು ಎರಡು ದಿನಗಳ ಬಳಿಕ ಕಾಲೇಜಿನ ಪ್ರಾಂಶುಪಾಲರು ಸಿಇಎನ್ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಿದ್ದಾರೆ .

Similar News