ದಾವಣಗೆರೆ | ವೃದ್ಧನ ಹನಿಟ್ರ್ಯಾಪ್‍ ಆರೋಪ; ಮಹಿಳೆಯ ಬಂಧನ

Update: 2022-11-08 18:44 GMT

ದಾವಣಗೆರೆ: ಕೊಟ್ಟ ಸಾಲವನ್ನು ವಾಪಸ್ ಕೇಳಿದ ವೃದ್ಧನೋರ್ವನನ್ನು ಮಹಿಳೆಯೋರ್ವಳು ಹನಿಟ್ರ್ಯಾಪ್‍ಗೆ ಸಿಲುಕಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಜಿ.ಕೆ. ಯಶೋಧ (32) ಬಂಧಿತ ಮಹಿಳೆ ಎಂದು ತಿಳಿದು ಬಂದಿದೆ. 

ಶಿವಕುಮಾರಸ್ವಾಮಿ ಬಡಾವಣೆಯ ನಿವಾಸಿಯಾಗಿರುವ ಎನ್. ಚಿದಾನಂದಪ್ಪ (79) ಎಂಬವರು ಸರಸ್ವತಿ ನಗರದಲ್ಲಿರುವ ಗಾರ್ಮೆಂಟ್ಸ್ ಒಂದರ ಮಾಲಕಳಾಗಿರುವ ಜಿ.ಕೆ. ಯಶೋಧರಿಗೆ 85 ಸಾವಿರ ರೂ. ಸಾಲವನ್ನು ನೀಡಿದ್ದರೆನ್ನಲಾಗಿದ್ದು,  ಹಲವು ದಿನಗಳ ಬಳಿಕ ಕೊಟ್ಟ ಸಾಲವನ್ನು ವಾಪಸ್ ಕೊಡುವಂತೆ ಕೇಳಿದಾಗ ಆಕೆ ಹಣ ಕೊಡದೇ ಸತಾಯಿಸಿದ್ದಾಳೆ ಎಂದು ಆರೋಪಿಸಲಾಗಿದೆ. 

ಇತ್ತೀಚೆಗೆ ಹಣ ಕೊಡುವುದಾಗಿ ಹೇಳಿ ಚಿದಾನಂದಪ್ಪ ಅವರನ್ನು ತನ್ನ ಮನೆಗೆ ಕರೆಯಿಸಿಕೊಂಡ ಮಹಿಳೆ,  ಪಾನೀಯದಲ್ಲಿ ಮತ್ತು ಬರುವ ಔಷಧಿ ಹಾಕಿಕೊಟ್ಟು, ವೃದ್ಧನನ್ನು ನಗ್ನಗೊಳಿಸಿ, ವೃದ್ಧನೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದು, ನಂತರ 15 ಲಕ್ಷ ರೂ. ಹಣ ನೀಡದಿದ್ದರೆ ಆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಲಾಗಿದೆ. 

ಈ ಬಗ್ಗೆ ಚಿದಾನಂದಪ್ಪ ಅವರು,  ಕೆಟಿಜೆ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಫೋಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

Similar News