ಸಚಿವ ಬೈರತಿ ಬಸವರಾಜಗೆ 15 ಲಕ್ಷ ರೂ. ನೀಡಿರುವ ಬಗ್ಗೆ ಆಡಿಯೊ ವೈರಲ್ ವಿಚಾರ: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

Update: 2022-11-09 07:02 GMT

ದಾವಣಗೆರೆ : ನಗರಾಭಿವೃದ್ಧಿ ಖಾತೆ ಸಚಿವ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬೈರತಿ ಬಸವರಾಜ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದಾರೆ. 

ಹೊನ್ನಾಳಿಗೆ ತೆರಳುವ ಮುನ್ನ ನಗರದ ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಚುನಾವಣೆಗಳು ಬಂದಾಗ ವಿರೋಧ ಪಕ್ಷಗಳು ಈ ರೀತಿಯ ಆರೋಪ ಮಾಡುವುದು ರೂಢಿ. ಈ ಪ್ರಕರಣದ ಬಗ್ಗೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಆಡಿಯೋ ಮತ್ತು ಬಂಧಿತರ ಹೇಳಿಕೆಯ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಯಾರು ತಪ್ಪಿತಸ್ಥರು ಎಂಬುದು ಹೊರ ಬರಲಿದೆ'' ಎಂದು ಬೊಮ್ಮಾಯಿ ತಿಳಿಸಿದರು. 

ಇದನ್ನೂ ಓದಿ'ಜಿಲ್ಲಾ ಉಸ್ತುವಾರಿ ಸಚಿವರಿಗೂ 15 ಲಕ್ಷ ರೂ. ಸಂದಾಯ': ದಾವಣಗೆರೆ ಪಾಲಿಕೆ ವ್ಯವಸ್ಥಾಪಕ– ಗುತ್ತಿಗೆದಾರನ ಆಡಿಯೊ ವೈರಲ್

''ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದಲ್ಲಿ ಏಳನೇ ವೇತನ ಆಯೋಗದ ಸಮಿತಿ ರಚಿಸಲಾಗಿದೆ. ಏಳನೇ ವೇತನ ಜಾರಿ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು. ಈಗ ಸುಧಾಕರ್  ರಾವ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ'' ಎಂದರು.

ಬೆಂಗಳೂರಿನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ ಹರಿದು ಬಂದಿರುವ ಬಂಡವಾಳದಲ್ಲಿ ಶೇ.80ರಷ್ಟು ಅಂದರೆ ಬೆಂಗಳೂರು ಹೊರಗಡೆ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಹುಮ್ನಾಬಾದ್, ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ರಾಜ್ಯದ 13 ರಿಂದ 14 ಜಿಲ್ಲೆಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಶಾಸಕ ಎಸ್.ವಿ.ರಾಮಚಂದ್ರ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.

Similar News